November 22, 2024

ಪ್ರೀತಿ ವಿಶ್ವಾಸದ ಬಾಳ್ವೆಯೇ ನಿಜವಾದ ಕ್ರಿಸ್ಮಸ್: ಫಾದರ್ ಗ್ರೆಗರಿ ಪಿರೇರಾ

0

ವಿಟ್ಲ: ಪರಸ್ಪರ ಕ್ಷಮಿಸಿ, ಪ್ರೀತಿ ವಿಶ್ವಾಸದಿಂದ ಬಾಳುವುದೇ ನಿಜವಾದ ಕ್ರಿಸ್ಮಸ್ ಎಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹೇಳಿದರು.

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾರವರ ಆದೇಶದಂತೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸರಳರೀತಿಯಲ್ಲಿ ಆಚರಿಸಲಾದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಬಲಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಮನುಕುಲದ ಉದ್ದಾರಕ್ಕಾಗಿಯೇ ಧರೆಗಿಳಿದು ಬಂದ ಪ್ರಭು ಯೇಸುಕ್ರಿಸ್ತರು ನಡೆದ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು ಎಂದ ಅವರು, ಮನಸ್ಸಿನಲ್ಲಿ ದ್ವೇಷ, ಕೋಪ, ಮತ್ಸರ, ಅಹಂಕಾರ, ಸ್ವಾರ್ಥ ಜೀವನ ತ್ಯಜಿಸಿ ಒಬ್ಬರಿಗೊಬ್ಬರು ಹೊಂದಾಣಿಕೆ ನಡೆಸಿ ಜೀವನ ನಡೆಸುವಂತೆ ಕರೆ ನೀಡಿದರು.ಕ್ರಿಸ್ಮಸ್ ಬಲಿಪೂಜೆ ಸಮಯದಲ್ಲಿ ಚರ್ಚ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸಿ ಎಲ್ಲರಿಗೂ ಆರ್ಶೀರ್ವಾದ ನೀಡಿದರು.

ಬಲಿ ಪೂಜೆಯ ಬಳಿಕ ಸೂರಿಕುಮೇರು ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕ್ರೈಸ್ತ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ, ಚರ್ಚ್ ಮುಖಂಡರಾದ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಅನಿತಾ ಮಾರ್ಟಿಸ್ ಉಪಸ್ಥಿತರಿದ್ದರು. ಭಾರತೀಯ ಕಥೊಲಿಕ ಯುವ ಸಂಚಾಲನ ಸೂರಿಕುಮೇರು ಬೊರಿಮರ್ ಘಟಕದ ಸದಸ್ಯೆ ಆಲಿಫಿಯಾ ಲಿಯೊನ್ನಾ ಪಿರೇರಾ ಹಾಗೂ ವೈ.ಸಿ.ಎಸ್. ಅಧ್ಯಕ್ಷೆ ಶಾಲನ್ ರೀಯಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು. ನೆರೆದ ಎಲ್ಲಾ ಭಕ್ತಾಭಿಮಾನಿಗಳಿಗೆ ಕ್ರಿಸ್ಮಸ್ ಕೇಕ್ ಹಂಚಲಾಯಿತು.

Leave a Reply

Your email address will not be published. Required fields are marked *

error: Content is protected !!