ಕುಸಿದು ಬಿದ್ದ ಮನೆಯ ಗೋಡೆ: ಬಾಲಕ ಮೃತ್ಯು
ಮಹಾಲಿಂಗಪುರ: ಶುಕ್ರವಾರ ಮುಂಜಾನೆಯಿಂದ ಪಟ್ಟಣದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರ ಮನೆಯ ಗೋಡೆ ಕುಸಿದು ಬಾಲಕ ದರ್ಶನ್ ನಾಗಪ್ಪ ಲಾತೂರ (11) ಮೃತಪಟ್ಟಿದ್ದಾನೆ. ಬಾಲಕನ ಸಹೋದರ ಶ್ರೀಶೈಲ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ಕುಟುಂಬ ಪತ್ರಾಸ್ (ತಗಡಿನ ಶೆಡ್) ಮನೆಯಲ್ಲಿ ವಾಸವಿದ್ದು, ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಇವರ ಬದಿಯ ಮನೆಯ ಗೋಡೆ ಕುಸಿದು ಪತ್ರಾಸ್ ಮೇಲೆ ಬಿದ್ದಿದೆ. ಪತ್ರಾಸ್ ಕೆಳಗೆ ಮಲಗಿದ್ದ ಬಾಲಕ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬಾಲಕನ ತಾಯಿ ರೂಪಾ, ಸಹೋದರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಕನ ತಂದೆ ನಾಗಪ್ಪ ಕೆಲಸದ ನಿಮಿತ್ಯ ಹೊರಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪಟ್ಟಣದ ಠಾಣಾಧಿಕಾರಿ ಕಿರಣ ಸತ್ತಿಗೇರಿ ಭೇಟಿ ನೀಡಿ ಪರಿಶೀಲಿಸಿದರು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




