ಕುಂದಾಪುರ: ತೋಡಿಗೆ ಜಾರಿ ಬಿದ್ದು ಯುವಕ ಸಾವು
ಕುಂದಾಪುರ: ತೆಂಗಿನ ತೋಟದಲ್ಲಿ ಕಾಯಿ ಕೊಯ್ದು ಸಾಗಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಮಳೆಯಿಂದ ನೀರು ತುಂಬಿದ್ದ ತೋಡಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಬಳಿ ಬುಧವಾರ ನಡೆದಿದೆ.
ಮೃತರನ್ನು ಅಚ್ಲಾಡಿ ಅಂಬೇಡ್ಕರ್ ಕಾಲೋನಿಯ ನಿವಾಸಿ ಶರತ್ (32) ಎಂದು ಗುರುತಿಸಲಾಗಿದೆ.
ಶರತ್ ಅವರು ಬುಧವಾರ ತಮ್ಮ ಮನೆಯ ಸಮೀಪದ ಅಚ್ಲಾಡಿಯಲ್ಲಿ ಗುತ್ತಿಗೆದಾರರೊಬ್ಬರೊಂದಿಗೆ ತೆಂಗಿನ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಮರದಿಂದ ತೆಂಗು ಕೊಯ್ದು ಟೆಂಪೋಗೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಬಳಿಕ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಬುಘವಾರ ವಿಪರೀತ ಮಳೆ ಇದ್ದ ಕಾರಣ ತೋಡು ತುಂಬಿ ಹರಿಯುತ್ತಿತ್ತು. ಗುರುವಾರ ಮಧ್ಯಾಹ್ನ ಕೈಲೇರಿ ಸಮೀಪದ ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಕೋಟಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಎಎಸ್‌ಐ ರವಿ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.




