March 5, 2026

ಅನೈತಿಕ ಸಂಬಂಧ: ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಕೊಲೆಗೈದ ತಾಯಿ

0
image_editor_output_image-1127790923-1757496364590.jpg

ಹಾವೇರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ತಾಯಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಮಗುವನ್ನು ಪ್ರಿಯಾಂಕಾ (4) ಎಂದು ಗುರುತಿಸಲಾಗಿದೆ. ರಾಣೇಬೆನ್ನೂರು ನಗರದ ಎಕೆಜಿ ಕಾಲನಿ ಗಂಗಮ್ಮ ಗುತ್ತಲ (36) ಹಾಗೂ ಗೌರಿಶಂಕರ ನಗರದ ಅಣ್ಣಪ್ಪ ಮಡಿವಾಳರ (40) ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಹೀಗಾಗಿ ಆರೋಪಿ ಗಂಗಮ್ಮ ಎರಡು ತಿಂಗಳ ಹಿಂದೆ ತನ್ನ ಪತಿಯನ್ನು ಬಿಟ್ಟು, ಮಗಳನ್ನು ಕರೆದುಕೊಂಡು ಅಣ್ಣಪ್ಪನ ಜೊತೆ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಈ ನಡುವೆ ತಮ್ಮ ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ಭಾವಿಸಿ, ಆಕೆಯ ಕೊಲೆಗೆ ಸಂಚು ರೂಪಿಸಿದ್ದರು.

ಅದರಂತೆ ಆ.5ರಂದು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಬಳಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು.

ನಂತರ ಬಾಲಕಿಯ ಅರ್ಧದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗುತ್ತಲ ಠಾಣೆ ಪೊಲೀಸರು ಬಾಲಕಿಯನ್ನು ಅಪರಿಚಿತ ಶವ ಎಂದು ಪರಿಗಣಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದರು.

Leave a Reply

Your email address will not be published. Required fields are marked *

error: Content is protected !!