ಬ್ರಹ್ಮಾವರ: ಒಂದೂವರೆ ವರ್ಷದ ಮಗುವಿಗೆ ನೇಣು ಬಿಗಿದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
ಬ್ರಹ್ಮಾವರ: ತನ್ನ ಒಂದೂವರೆ ವರ್ಷದ ಮಗುವಿಗೆ ನೇಣು ಬಿಗಿದು ಬಳಿಕ ತಾಯಿ ತಾನೂ ನೇಣಿಗೆ ಶರಣಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ.
ಮೃತರನ್ನು ಸುಷ್ಮೀತಾ (23) ಹಾಗೂ ಮಗು ಶ್ರೇಷ್ಠ (1.6ವ) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪತಿ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ದುರಂತ ಸಾವು ತಂದುಕೊಂಡಿದ್ದಾರೆ. ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2009ರಲ್ಲಿ ನೆರೆಮನೆಯ ವಿನ್ಸೆಂಟ್ ಪಾಯಸ್ ಎಂಬವರ ಮೇಲೆ ಸುಭಾಷ್ ಮತ್ತು ಮನೆಯವರು ಹಲ್ಲೆ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ವಿಚಾರಣೆ ನಡೆದು 2012 ರಲ್ಲಿ ಜಿಲ್ಲಾ ನ್ಯಾಯಾಲಯ ಸುಭಾಷ್, ಆತನ ತಾಯಿ ಮತ್ತು ಸೋದರನಿಗೆ 12 ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಿತ್ತು. ಸುಭಾಷ್ ಕುಟುಂಬ ಜಿಲ್ಲಾ ಕೋರ್ಟ್ ನೀಡಿದ್ದ ಶಿಕ್ಷೆಯ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಸುದೀರ್ಘ 12 ವರ್ಷಗಳ ವಾದ- ಪ್ರತಿವಾದ ನಡೆದ ಬಳಿಕ ಕಳೆದ ಜುಲೈ ತಿಂಗಳಲ್ಲಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಇದರಿಂದಾಗಿ ತಾಯಿ, ಮಕ್ಕಳು 12 ವರ್ಷಗಳ ಶಿಕ್ಷೆ ಅನುಭವಿಸಲು ಜೈಲಿಗೆ ಹೋಗುವುದು ಪಕ್ಕಾ ಆಗಿತ್ತು.
ಇದೇ ವಿಚಾರದಲ್ಲಿ ವಕೀಲರ ಜೊತೆಗೆ ಚರ್ಚಿಸಲು ಸುಭಾಷ್ ಬೆಂಗಳೂರು ತೆರಳಿದ್ದರು. ಅಲ್ಲದೆ, ಶಿಕ್ಷೆಯ ವಿಚಾರದಲ್ಲಿ ಕುಟುಂಬಸ್ಥರು ತೀವ್ರ ಚಿಂತೆಗೆ ಒಳಗಾಗಿದ್ದರು. ಪತಿಗೆ ಶಿಕ್ಷೆ ಘೋಷಣೆ ಆಗಿದ್ದನ್ನು ತಿಳಿದು ಸುಷ್ಮಿತಾ ತೀವ್ರ ನೊಂದುಕೊಂಡಿದ್ದರು ಎಂದು ಹೇಳಲಾಗಿದೆ.





