ಉಡುಪಿ: ತಾಯಿ-ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಉಡುಪಿ: ಮಗುವನ್ನು ನೇಣಿಗೆ ಹಾಕಿ ನಂತರ ತಾಯಿಯೂ ಆತ್ಮಹತ್ಯೆ ಶರಣಾದ ಘಟನೆ ಬ್ರಹ್ಮಾವರ ತಾಲೂಕಿನ ಕುಂಜಾಲು ಸಮೀಪದ ಹೇರಂಜೆ ಕ್ರಾಸ್ ಎಂಬಲ್ಲಿ ಸೆಪ್ಟೆಂಬರ್ 1ರಂದು(ಸೋಮವಾರ) ಮಧ್ಯಾಹ್ನ ಹೊತ್ತಿಗೆ ನಡೆದಿರುವುದಾಗಿ ತಿಳಿದು ಬಂದಿದೆ.
ಮೃತರನ್ನು ಸುಶ್ಮಿತಾ (35) ಮತ್ತು ಅವರ ಪುತ್ರಿ ಶ್ರೇಷ್ಠ (1 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ. ಸುಶ್ಮಿತಾ ಅವರ ಪತಿ ನ್ಯಾಯಾಲಯದ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಬ್ರಹ್ಮಾವರದಲ್ಲಿ ಸೆಪ್ಟೆಂಬರ್ 1 ರ ಮಧ್ಯಾಹ್ನ ಮಹಿಳೆ ಮತ್ತು ಅವರ ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಸುಶ್ಮಿತಾ ಮತ್ತು ಅವರ ಒಂದೂವರೆ ವರ್ಷದ ಪುತ್ರಿ ಎಂದು ಗುರುತಿಸಲಾಗಿದೆ. ತಾಯಿ ಮೊದಲು ಮಗುವಿಗೆ ನೇಣು ಬಿಗಿದು, ನಂತರ ಆಕೆಯೂ ನೇಣು ಬಿಗಿದುಕೊಂಡಿದ್ದಾರೆ ಎಂದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳದಲ್ಲಿ ದೊರೆತ ಮರಣಪತ್ರದಲ್ಲಿ ಘಟನೆಗೆ ತಾನೇ ಸಂಪೂರ್ಣ ಜವಾಬ್ದಾರಿ ಎಂದು ಬರೆದುಕೊಂಡಿದ್ದಾರೆ. ಅವರ ಪತಿ 2009ರ ಪ್ರಕರಣದಲ್ಲಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಹೈಕೋರ್ಟ್ ನಿಂದ ಅಪರಾಧಿ ಎಂದು ಸಾಬೀತಾಗಿದ್ದಾರೆ” ಎಂದು ಮಾಹಿತಿ ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.





