ಸುರತ್ಕಲ್: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು, ಮತ್ತೋರ್ವನಿಗೆ ಗಾಯ
ಸುರತ್ಕಲ್: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ಸುರತ್ಕಲ್ ಸಮೀಪದ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ.
ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ (61) ಮೃತ ದುರ್ದೈವಿ. ವಿಶ್ವನಾಥ (16) ಗಾಯಗೊಂಡ ಬಾಲಕನಾಗಿದ್ದಾನೆ. ಕರುಣಾಕರ ಶೆಟ್ಟಿ ಅವರು ಮುಕ್ಕದಲ್ಲಿನ ಅಂಗಡಿ ಮುಚ್ಚಿ ಹಾಲಿಗೆ ಬಂದಿದ್ದ ವಿಶ್ವನಾಥ ಎಂಬ ಬಾಲಕನನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸಂದರ್ಭ ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಕರುಣಾಕರ ಶೆಟ್ಟಿ ತಲೆಗೆ ಬಲವಾದ ಹೊಡೆತ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಶ್ವನಾಥ ಅವರಿಗೆ ಕೈ-ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾರು ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.





