ಪಾದರಕ್ಷೆಯಲ್ಲಿ ಅಡಗಿದ್ದ ಹಾವು ಕಚ್ಚಿ ವ್ಯಕ್ತಿ ಮೃತ್ಯು
ಬೆಂಗಳೂರು: ಪಾದರಕ್ಷೆಯಲ್ಲಿ ಅಡಗಿದ್ದ ಹಾವು ಕಚ್ಚಿ ಮಂಜು ಪ್ರಕಾಶ್ (41) ಮೃತಪಟ್ಟ ಘಟನೆ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಸಂಭವಿಸಿದೆ.
ಚಪ್ಪಲಿಯ ಒಳಗೆ ಕೊಳಕು ಮಂಡಲ ಹಾವು ಸೇರಿಕೊಂಡಿತ್ತು. ಇದನ್ನು ಗಮನಿಸದೆ ಮಂಜು ಚಪ್ಪಲಿ ಧರಿಸಿದ್ದರು. ಪ್ರಕಾಶ್ ಟಿಸಿಎಸ್ ಉದ್ಯೋಗಿಯಾಗಿದ್ದು, ರಂಗನಾಥ ಲೇಔಟ್ ನಲ್ಲಿ ವಾಸವಾಗಿದ್ದರು.
ಅವರಿಗೆ ಹಾವು ಕಚ್ಚಿತ್ತಾದರೂ ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ಕಾಲಿನ ಸ್ಪರ್ಶ ಕಳೆದು ಕೊಂಡಿದ್ದರಿಂದ ನೋವು ಅನುಭವಕ್ಕೆ ಬರಲಿಲ್ಲ. ಮನೆಯಲ್ಲಿ ಮಲಗಿದ್ದ ಅವರು ಮೃತಪಟ್ಟಿದ್ದಾರೆ. ಪರಿಶೀಲಿಸಿದಾಗ ಚಪ್ಪಲಿಯ ಒಳಗೆ ಹಾವು ಕೂಡ ಸತ್ತು ಬಿದ್ದಿರುವುದು ಗಮನಕ್ಕೆ ಬಂತು.
2016ರಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಂಜು ಪ್ರಕಾಶ್ ಬಲಗಾಲು ಸ್ಪರ್ಶಜ್ಞಾನ ಕಳೆದುಕೊಂಡಿತ್ತು. ಇದೇ ಕಾಲಿಗೆ ಹಾವು ಕಚ್ಚಿದ್ದರಿಂದ ನೋವು ಅವರ ಗಮನಕ್ಕೆ ಬಂದಿರಲಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ಅವರು ಜ್ಯೂಸ್ ತರಲು ಹೊರ ಹೋಗಿದ್ದರು. ಮನೆಗೆ ಬಂದು ಮಲಗಿದ ಅವರು ಮತ್ತೇ ಮೇಲೆ ಏಳಲಿಲ್ಲ’ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ
ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಾವು ಕಡಿತದಿಂದ ಸಾವು ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





