ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ: ಮೂವರು ಮೃತ್ಯು, 7 ಮಂದಿ ಗಂಭೀರ
ಉತ್ತರ ಕನ್ನಡ: ರಾ.ಹೆದ್ದಾರಿ ೬೩ ಹಿಟ್ಟಿನಬೈಲ್ ಕ್ರಾಸ್ ಸಮೀಪ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಮೃತಪಟ್ಟು, 7 ಜನ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ (ಆ.15) ತಡರಾತ್ರಿ ನಡೆದಿದೆ.
ಅಪಘಾತದಲ್ಲಿ ಗುಳೇದಗುಡ್ಡದ ನೀಲವ್ವ ಯಲದುರ್ಗಪ್ಪ ಹರದೊಳ್ಳಿ(40), ಜಾಲಿಹಾಳದ ಗಿರಿಜವ್ವ ತಂದೆ ಅಯ್ಯಪ್ಪ ಬೂದನ್ನವರ್(30) ಹಾಗೂ ಇನ್ನೋರ್ವ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಸ್ಥಳಿಯ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಅಮೀನಗಢದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ಸಿನ ಚಾಲಕ ಯಮನಪ್ಪ ತ ಮುತ್ತಪ್ಪ ಮಾಗಿ ಎಂಬಾತ ಬಸ್ಸನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಹತ್ತಿರ ಹೆದ್ದಾರಿಯಲ್ಲಿ ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ನಿಂತಿದ್ದ ಲಾರಿಗೆ ಹಿಂದಿನಿಂದ ವೇಗದಿಂದ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಲಾರಿ ಚಾಲಕ ಹಾಗೂ ಬಸ್ ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.




