ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ಮೇಲೆ ನಿರ್ಬಂಧಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ಏಕಪಕ್ಷೀಯವಾಗಿ ನಿರ್ಬಂಧಕ ಆಜ್ಞೆಯನ್ನು ಪಡೆದುಕೊಂಡಿದ್ದ ಧರ್ಮಸ್ಥಳ ಆಡಳಿತ ಮಂಡಳಿಗೆ ಇದೀಗ ಹಿನ್ನಡೆಯಾಗಿದ್ದು, ಮಾಧ್ಯಮಗಳ ಮೇಲೆ ನಿರ್ಬಂಧ ಕೋರಿ ಸಲ್ಲಿಸಲಾಗಿದ್ದ ಧರ್ಮಸ್ಥಳ ಸಂಸ್ಥೆಗಳ ಪರ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ. ಸಿಟಿ ಸಿವಿಲ್ ನ್ಯಾಯಾಧೀಶೆ ಅನಿತಾ ಎಂ. ಅವರು ಮಾಧ್ಯಮಗಳ ಮೇಲಿನ ನಿರ್ಬಂಧ ಕೋರಿದ್ದ ಅರ್ಜಿಯನ್ನು ಬುಧವಾರ ವಜಾ ಮಾಡಿದ್ದಾರೆ.
ಧರ್ಮಸ್ಥಳ ಸುತ್ತಮುತ್ತ ಕಾಡಿನಲ್ಲಿ ನೂರಾರು ಹೆಣಗಳನ್ನು ಹೂತ ಆರೋಪದ ಪ್ರಕರಣದ ಬಗ್ಗೆ ಮಾಧ್ಯಮಗಳ ಸುದ್ದಿ ಪ್ರಸಾರ ನಿರ್ಬಂಧಿಸಬೇಕೆಂದು ಧರ್ಮಸ್ಥಳ ದೇವಸ್ಥಾನದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಪರವಾಗಿ ಬೆಂಗಳೂರು ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಇದಲ್ಲದೆ, 8842 ಮಾಧ್ಯಮ ಲಿಂಕ್ ಗಳನ್ನು ಡಿಲೀಟ್ ಮಾಡಬೇಕೆಂದು ಮಾನನಷ್ಟ ಮೊಕದ್ದಮೆಯನ್ನೂ ಸಲ್ಲಿಸಲಾಗಿತ್ತು. ಇದರಲ್ಲಿ 4140 ಯೂಟ್ಯೂಬ್ ವಿಡಿಯೋಗಳು, 932 ಫೇಸ್ಟುಕ್ ಪೋಸ್ಟ್ ಗಳು, 3584 ಇನ್ ಸ್ಟಾ ಗ್ರಾಮ್ ಪೋಸ್ಟ್ ಗಳು, 108 ನ್ಯೂಸ್ ಆರ್ಟಿಕಲ್ ಗಳು, 37 ರಿಡಿಫ್ ಪೋಸ್ಟ್ ಗಳು ಮತ್ತು 41 ಟ್ವಿಟ್ ಗಳನ್ನು ತೆಗೆದುಹಾಕಬೇಕೆಂದು ಕೋರಲಾಗಿತ್ತು. ಈ ಹಿನ್ನಲೆ ಕೋರ್ಟ್ ಯಾವುದೇ ವಿಚಾರಣೆ ನಡೆಸದೇ ಏಕಪಕ್ಷೀಯವಾಗಿ ಆದೇಶ ನೀಡಿತ್ತು.
ಈ ಮಧ್ಯೆ, ನ್ಯಾಯಾಲಯ ಜುಲೈ 18 ರಂದು ಹೊರಡಿಸಿದ್ದ ಪ್ರತಿಬಂಧಕಾದೇಶವನ್ನು ಜುಲೈ 24ರಂದು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು. ನ್ಯಾಯಾಧೀಶರು ಮೊಕದ್ದಮೆ ಸಲ್ಲಿಸಿದ್ದ ಹರ್ಷೇಂದ್ರ ಕುಮಾರ್ ಅವರ ಕುಟುಂಬದಿಂದ ನಿರ್ವಹಿಸಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ತಮ್ಮ ವಕೀಲರಿಗೆ ಮನವಿ ಮಾಡಿದ್ದರು. ವಕೀಲರು ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಮತ್ತು ಪತ್ರ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ್ದ ನ್ಯಾಯಾಧೀಶರು, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರೆಯುವಂತಾಗಲು ನ್ಯಾಯ ಒದಗಿಸಿದರಷ್ಟೇ ಸಾಲದು, ಅದು ಕಾಣುವಂತಿರಬೇಕು ಎಂದಿದ್ದರು. ನಾನು ಈ ಮೊಕದ್ದಮೆಯಲ್ಲಿ ಪಕ್ಷಕಾರನಲ್ಲದಿದ್ದರೂ ಅಥವಾ ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲದಿದ್ದರೂ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಕಾಯಿದೆ 1979 ರ ಸೆಕ್ಷನ್ 13(2)(b) ಪ್ರಕಾರ OS No.5185/2025 ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಪ್ರಧಾನ ನಗರ ಸಿವಿಲ್ ಸೆಷನ್ಸ್ ನ್ಯಾಯಾಧೀಶರಿಗೆ ವಿನಂತಿ ಸಲ್ಲಿಸುವುದು ಸೂಕ್ತ ಎಂದು ಪ್ರಕರಣ ಆಲಿಸುವುದರಿಂದ ಹಿಂದೆ ಸರಿದಿದದ್ದರು.




