ಬಜ್ಪೆ: ಎಸ್‌ಡಿಪಿಐ ನಾಯಕರ ಮನೆಗೆ NIA ದಾಳಿ; ದ್ವೇಷ ರಾಜಕೀಯದ ಇನ್ನೊಂದು ಹೆಜ್ಜೆ: ಜಮಾಲ್ ಜೋಕಟ್ಟೆ
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ತನಿಖೆ ನಡೆಸುತ್ತಿರುವ NIA ತಂಡ ತನಿಖೆಯ ನೆಪದಲ್ಲಿ ಎಸ್‌ಡಿಪಿಐ ನಾಯಕರ ಮನೆಗಳಿಗೆ ದಾಳಿ ನಡೆಸಿರುವುದು ಖಂಡನೀಯ, ಇದು ದ್ವೇಷ ರಾಜಕೀಯದ ಇನ್ನೊಂದು ಹೆಜ್ಜೆಯಾಗಿದೆ. ಜೊತೆಗೆ ಈಗಾಗಲೇ ಧರ್ಮಸ್ಥಳ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯು ಗ್ಯಾಂಗ್ ವಾರ್ ನಿಂದ ಕೊಲೆ ಹಾಗು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸ್ಥಳೀಯ ಪೋಲಿಸರು ಬಂಧಿಸಿದ್ದರು. ಹತ್ಯೆಯ ಹಿಂದಿನ ಕಾರಣವನ್ನು ಅಂದಿನ ಮಂಗಳೂರು ಕಮಿಷನರ್ ಮಾಧ್ಯಮ ಹೇಳಿಕೆ ನೀಡಿದ್ದರು. ಆ ಪ್ರಕರಣದಲ್ಲಿ ಎಸ್‌ಡಿಪಿಐಯ ಯಾವುದೇ ಕಾರ್ಯಕರ್ತರ ಪಾತ್ರ ಇಲ್ಲ ಎಂದು ತನಿಖೆಯ ಆರಂಭದಲ್ಲೇ ಪೋಲಿಸರಿಗೆ ಮನವರಿಕೆ ಆಗಿತ್ತು. ಆದರೆ ಈ ಪ್ರಕರಣದಲ್ಲಿ SDPI ಯನ್ನು ಗುರಿಪಡಿಸಬೇಕೆಂಬ ದುರುದ್ದೇಶದಿಂದ ಎಸ್‌ಡಿಪಿಐಯ ವಿರುದ್ಧ ಆರೋಪ ಹೊರಿಸಿ ಕೇಂದ್ರ ಸರ್ಕಾರದ ಅಧಿಕಾರವನ್ನು ಬಳಸಿಕೊಂಡು NIA ಗೆ ವಹಿಸಿ ಪಕ್ಷವನ್ನು ಗುರಿಪಡಿಸಿ ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಮಾನಸಿಕ ಕಿರುಕುಳ ನೀಡುವ ರಾಜಕೀಯ ಷಡ್ಯಂತ್ರ ಭಾಗವಾಗಿ ಈಗ ಎಸ್‌ಡಿಪಿಐ ನಾಯಕರ ಮನೆಗಳಿಗೆ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಪಂಜರದ ಗಿಣಿ NIA ಕೃತ್ಯವನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಹಾಗೂ ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಜಮಾಲ್ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




