ಬೈಂದೂರು: ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು
ಬೈಂದೂರು : ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.
ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38), ಜಗ್ಗು ಯಾನೆ ಜಗದೀಶ್ ಖಾರ್ವಿ (36) ನೀರುಪಾಲಾದವರು. ಸಂತೋಷ್ ಖಾರ್ವಿ ಎಂಬವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಈ ನಡುವೆ ಕಡಲಿಗಿಳಿದ ಮೀನುಗಾರರು ಕಡಲಬ್ಬರ ಕಂಡು ವಾಪಸ್ ಆಗುತ್ತಿದ್ದಾಗ ನಾಡದೋಣಿ ಮಗುಚಿದೆ. ಈ ವೇಳೆ ನೀರಿಗೆ ಬಿದ್ದ ಓರ್ವನನ್ನು ರಕ್ಷಿಸಲು ಇತರರು ಮುಂದಾಗಿದ್ದು, ಅವರೂ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.




