March 15, 2026

ಉಡುಪಿ: ಗೋವಿನ ತಲೆ ಎಸೆದ ಪ್ರಕರಣ: ಕೇಶವ, ನವೀನ್ ಸಹಿತ ಆರು ಮಂದಿಯ ಬಂಧನ

0
image_editor_output_image2141927816-1751356231235.jpg

ಉಡುಪಿ: ಆರೂರು ಗ್ರಾಮದ ಕುಂಜಾಲ್‌ ಜಂಕ್ಷನ್‌ ಬಳಿ ಹಸುವಿನ ತಲೆ ಮತ್ತು ಚರ್ಮ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಕೇಶವ, ರಾಮಣ್ಣ, ನವೀನ್, ಪ್ರಸಾದ್, ರಾಜೇಶ್, ಸಂದೇಶ್‌ ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ರಾಮ ಮಂದಿರದ ಬಳಿ ಶನಿವಾರ ತಡರಾತ್ರಿ ಗೋವಿನ ರುಂಡ ಪತ್ತೆಯಾಗಿತ್ತು.

ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ ಅವರು ನಾಲ್ಕು ತಂಡಗಳನ್ನು ರಚಿಸಿದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ ಮಾತನಾಡಿ, ಕುಂಜಾಲು ಜಂಕ್ಷನ್‌ನಲ್ಲಿ ಹಸುವಿನ ರುಂಡ, ದೇಹದ ಇತರೆ ಭಾಗ ಪತ್ತೆಯಾಗಿತ್ತು. ಕುಂಜಾಲು ಗ್ರಾಮದ ನಿವಾಸಿ ರಾಮಣ್ಣ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕೇಶವ್ ಎಂಬುವವರು ಹಸು ನೋಡಿಕೊಳ್ಳಲು ಆಗುತ್ತಿಲ್ಲವೆಂದು ರಾಮಣ್ಣಗೆ ನೀಡಿದ್ದರು ಎಂದು ತಿಳಿಸಿದರು.

ಸಂದೇಶ್ ಎಂಬವರ ಸ್ವಿಫ್ಟ್ ಕಾರಿನಲ್ಲಿ ಹಸುವನ್ನು ಸಾಗಾಟ ಮಾಡಲಾಗಿತ್ತು. ಕ್ವಾರಿ ಬಳಿ ಆರೋಪಿಗಳಾದ ಪ್ರಸಾದ್, ನವೀನ್ ಮತ್ತು ರಾಮಣ್ಣ ಮೂವರು ಸೇರಿಕೊಂಡು ಹಸು ಕಡಿದಿದ್ದರು. ಬಳಿಕ, ಹಸುವಿನ ದೇಹವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ತಲೆ ರಾಮ ಮಂದಿರದ ಬಳಿ ಬಿದ್ದಿದೆ. ಆರೋಪಿಗಳು ಉದ್ದೇಶ ಪೂರ್ವಕವಾಗಿ ಹಸುವಿನ ರುಂಡ ದೇವಸ್ಥಾನದ ಬಳಿ ಇಟ್ಟಿರಲಿಲ್ಲ. ಸಾಗಾಟದ ವೇಳೆ ಆಕಸ್ಮಿಕವಾಗಿ ಹಸುವಿನ ತಲೆ ಬಿದ್ದಿದೆ. ಆರೋಪಿಗಳು ಹಸು ದೇಹ ಸಾಗಿಸಲು ಬಳಸಿದ್ದ ಸ್ಕೂಟಿ, ಕಾರು ವಶಕ್ಕೆ ಪಡೆದಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!