December 16, 2025

ಮಂಗಳೂರು: ಬೆಲೆಬಾಳುವ ಕಾರು ನೋಂದಣಿಯ ವೇಳೆ ನಕಲಿ ದಾಖಲೆ ಸೃಷ್ಟಿಸಿ ತೆರಿಗೆ ವಂಚನೆ: ಆರ್‌ಟಿಒ ಕಚೇರಿಯ ಮೂವರು ಅಧಿಕಾರಿಗಳು ಅಮಾನತು

0
image_editor_output_image-730595468-1751079842083.jpg

ಮಂಗಳೂರು: ಬೆಲೆಬಾಳುವ ಕಾರು ನೋಂದಣಿಯ ವೇಳೆ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ಲಕ್ಷಾಂತರ ರೂ. ತೆರಿಗೆ ವಂಚಿಸಿದ ಆರೋಪದಲ್ಲಿ ಮಂಗಳೂರು ಆರ್‌ಟಿಒ ಕಚೇರಿಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಆರ್‌ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ನೀಲಪ್ಪ, ಕಚೇರಿಯ ಅಧೀಕ್ಷಕಿ ರೇಖಾ ನಾಯಕ್ ಹಾಗೂ ಸ್ಥಾನೀಯ ಸಹಾಯಕಿ ಸರಸ್ವತಿ ಅಮಾನತುಗೊಂಡ ಅಧಿಕಾರಿಗಳು.

ಈ ಮಧ್ಯೆ ಆರ್‌ಟಿಒ ಶ್ರೀಧರ್ ಮಲ್ಲಾಡ್ ವಿರುದ್ಧ ಇಲಾಖಾ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 1,96,95,000 ರೂ.ಗಳ ಐಷಾರಾಮಿ ಕಾರನ್ನು 32,15,000 ರೂ. ಮೌಲ್ಯಕ್ಕೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಆರ್‌ಟಿಒ ಅಧಿಕಾರಿ ಹಾಗೂ ಸಿಬ್ಬಂದಿಯ ಸಹಕಾರ ಇತ್ತೆನ್ನಲಾಗಿದೆ. ಸರಕಾರಕ್ಕೆ ಲಕ್ಷಾಂತರ ರೂ. ಮೊತ್ತದ ತೆರಿಗೆ ವಂಚನೆಗೆ ಸಹಕರಿಸಿದ ಆರೋಪದ ಮೇರಗೆ ಮೂವರನ್ನು ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಉಪ ಆಯುಕ್ತರ ವರದಿಯ ಮೇರೆಗೆ ಬೆಂಗಳೂರಿನ ಆಯುಕ್ತರು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.

ನೋಂದಣಿಗೆ ಅರ್ಜಿ ಸಲ್ಲಿಸಿದ ವೇಳೆ ನೀಲಪ್ಪ ನಿಗದಿತ ಮೌಲ್ಯದ ಬದಲು ಕಡಿಮೆ ಮೊತ್ತದ ಮೌಲ್ಯ ನಮೂದಿಸಿದ್ದರು. ಆ ಅರ್ಜಿಯನ್ನು ರೇಖಾ ನಾಯಕ್ ಪರಿಶೀಲಿಸಿದ್ದರು. ಬಳಿಕ ಸರಸ್ವತಿ ಅರ್ಜಿಯನ್ನು ಅನುಮೋದಿಸಿದ್ದರು ಎಂದು ಹೇಳಲಾಗುತ್ತಿದೆ.

ನಕಲಿ ದಾಖಲೆ ಸೃಷ್ಟಿಸಿ ಕಾರು ನೋಂದಣಿ ಮಾಡಿ ಸರಕಾರಕ್ಕೆ ತೆರಿಗೆ ನಷ್ಟ ಉಂಟು ಮಾಡಿರುವುದು ಮೈಸೂರಿನಲ್ಲಿ ದಾಖಲೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಬಳಿಕ ಮಂಗಳೂರು ಆರ್‌ಟಿಒ ಕಚೇರಿಗೆ ಶಿವಮೊಗ್ಗ ಉಪ ಆಯುಕ್ತರು ಭೇಟಿ ನೀಡಿ ತನಿಖೆ ಕೈಗೊಂಡಿದ್ದರು. ಉಪ ಆಯುಕ್ತರ ವರದಿಯ ಅಧಾರದಲ್ಲಿ ಬೆಂಗಳೂರಿನ ಆಯುಕ್ತ ಯೋಗೀಶ್ ಈ ಮೂವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇಲಾಖಾ ವಿಚಾರಣೆ ಬಾಕಿಯಿರಿಸಿ ಮೂವರನ್ನು ಅಮಾನತುಗೊಳಿಸಿದ್ದಲ್ಲದೆ ಬೇರೆ ಕಡೆಗಳಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ನೀಲಪ್ಪರನ್ನು ಶಿವಮೊಗ್ಗ, ರೇಖಾ ನಾಯಕ್‌ರನ್ನು ಚಿಕ್ಕಮಗಳೂರಿಗೆ ಹಾಗೂ ಸರಸ್ವತಿಯವರನ್ನು ಬೆಂಗಳೂರು ಉತ್ತರ ಆರ್‌ಟಿಒ ಕಚೇರಿಗೆ ವರ್ಗಾವಣೆ ಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!