ಅಹ್ಮದಾಬಾದ್: ಏರ್ ಇಂಡಿಯಾ ವಿಮಾನ ದುರಂತ: ಕೇರಳದ ರಂಜಿತಾ ನಾಯರ್ ಮೃತದೇಹ ಸ್ವಗೃಹಕ್ಕೆ

ಗುಜರಾತ್: ಅಹ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತ ಕೇರಳದ ನರ್ಸ್ ರಂಜಿತಾ ನಾಯರ್ ಅವರ ಮೃತದೇಹವನ್ನು ಮಂಗಳವಾರ ಹುಟ್ಟೂರು ಪತ್ತನಂತಿಟ್ಟ ಜಿಲ್ಲೆಯ ಸ್ವಗೃಹಕ್ಕೆ ತರಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯ ನಿವಾಸಿಯಾಗಿರುವ ರಂಜಿತಾ ನಾಯರ್ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ರಂಜಿತಾ ಮೃತಪಟ್ಟಿದ್ದರು. ಡಿಎನ್‌ಎ ಪರೀಕ್ಷೆಯ ಮೂಲಕ ಅವರ ಮೃತದೇಹದ ಗುರುತು ಪತ್ತೆ ಮಾಡಲಾಗಿತ್ತು.
ರಂಜಿತಾ ನಾಯರ್ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 7 ಗಂಟೆ ಸುಮಾರಿಗೆ ತಿರುವನಂತಪುರದ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸಚಿವರಾದ ವಿ. ಶಿವನ್‌ಕುಟ್ಟಿ ಮತ್ತು ಜಿ.ಆರ್. ಅನಿಲ್ ಅವರು ಮೃತದೇಹವನ್ನು ಸ್ವೀಕರಿಸಲು ಮತ್ತು ಅಂತಿಮ ನಮನ ಸಲ್ಲಿಸಲು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆಗಿದ್ದರು.
ರಂಜಿತಾ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪುಲ್ಲದ್‌ನಲ್ಲಿರುವ ಶಾಲೆಯಲ್ಲಿ ಅಂತಿಮ ದರ್ಶನದ ಬಳಿಕ ಕುಟುಂಬದ ಮನೆಯ ಆವರಣದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.