March 15, 2026

ಉಪ್ಪಿನಂಗಡಿ: ಕುಮಾರಧಾರ ನದಿ ದಡದಲ್ಲಿ ಮೊಸಳೆ ಪತ್ತೆ

0
IMG-20250618-WA0004.jpg

ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಮೊಸಳೆ ನೋಡಲು ಹೋದವರನ್ನು ಕಂಡು ಮೊಸಳೆಯು ಬಾಯಗಳಿಸಿ ಆಕ್ರಮಣಕಾರಿಯಂತೆ ಇವರ ಕಡೆ ನೋಡಿ ನದಿ ನೀರಿಗೆ ಇಳಿದು ಹೋದ ಘಟನೆ ಇಂದು ಸಂಜೆ ನಡೆದಿದೆ.

ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು ನೋಡಲು ಹೋದಾಗ ಮೊಸಳೆಯು ನದಿ ದಡದಲ್ಲಿ ವಿಶ್ರಾಂತಿ ಪಡೆಯುವುದು ಕಂಡು ಬಂತು. ಇವರು ಸ್ವಲ್ಪ ಹತ್ತಿರಕ್ಕೆ ಹೋದಾಗ ಮೊಸಳೆ ಆಕ್ರಮಣಕಾರಿಯಂತೆ ಇವರ ಕಡೆ ನೋಡಿದ್ದು, ಮತ್ತೆ ನದಿ ನೀರಿಗೆ ಇಳಿದು ನಾಪತ್ತೆಯಾಗಿದೆ.

ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು. ಕಳೆದ ವರ್ಷ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಬಳಿಯೂ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ನದಿಯಲ್ಲಿ ಮೊಸಳೆಯಿರುವುದು ನದಿಗೆ ಮೀನು ಬೇಟೆಗೆಂದು ಹೋಗುವವರಲ್ಲಿ ಆತಂಕ ಸೃಷ್ಟಿಸಿದೆ.

ಒಂದೆಡೆ ನದಿಯಲ್ಲಿ ಮೊಸಳೆಯು ಕಾಣಿಸಿಕೊಂಡರೆ ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದ ಸಂದರ್ಭ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ನೇತ್ರಾವತಿ ನದಿಯಲ್ಲಿ ಕಡವಿನ ಬಾಗಿಲ ಸಮೀಪ ಸುಮಾರು 10ರಷ್ಟಿದ್ದ ನೀರು ನಾಯಿಗಳ ಹಿಂಡು ಕಾಣಿಸಿಕೊಂಡಿತ್ತು ಎಂದು ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದ ನೇತೃತ್ವ ವಹಿಸಿರುವ ಗೃಹ ರಕ್ಷಕದಳದ ಸಿಬ್ಬಂದಿ ದಿನೇಶ್ ಬಿ. ತಿಳಿಸಿದ್ದಾರೆ.

ಕಳೆದೆರಡು ವರ್ಷಗಳ ಹಿಂದೆ ಸರಕಾರದ ವತಿಯಿಂದ ನದಿಗೆ ಮೀನಿನ ಮರಿಗಳನ್ನು ಹಾಕಲಾಗಿದ್ದು, ಅವುಗಳು ಈಗ ಬೆಳೆದು ದೊಡ್ಡದಾಗಿವೆ. ಮೀನು ಹೇರಳವಾಗಿರು ಕಾರಣ ಇದೀಗ ನೀರು ನಾಯಿಗಳು ಅದರ ಬೇಟೆಗೆ ನದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!