ಹತ್ಯೆಯಾದ ಅಬ್ದುಲ್ ರಹೀಂ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ: ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಸ್ವಯಂ ಪ್ರೇರಿತ ಬಂದ್
ಮಂಗಳೂರು: ಬಂಟ್ವಾಳ ತಾಲ್ಲೂಕಿನ ಇರಾ ಕೋಡಿ ಎಂಬಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹೀಂ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅಂತಿಮ ಯಾತ್ರೆಯ ಸಾಗುವ ವೇಳೆ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಹೊರಟ ಅಂತಿಮ ಯಾತ್ರೆಯು ಮಂಗಳೂರಿನ ನಂತೂರು, ಪಡೀಲ್ ಅಡ್ಯಾರ್ ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು.
ಅಂಗಡಿಗಳು ಬಂದ್:
ರಹೀಂ ಅವರ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್ ಫರಂಗಿಪೇಟೆಯ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಅಂತಿಮ ನಮನ ಸಲ್ಲಿಸಿದರು. ಫರಂಗಿಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಿ.ಸಿ.ರೋಡ್‌ನ ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ತಲುಪುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಿ.ಸಿ.ರೋಡ್‌ನಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು ಆಕ್ರೋಶಿತ ಯುವಕರು ಬಲವಂತದಿಂದ ಮುಚ್ಚಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದರು.
ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಅಂತಿಮಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ರಹೀಂ ಊರಾದ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಅವರ ಮನೆಗ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಅಲ್ಲಿನ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.




