ಮಂಗಳೂರು: ಭಾರೀ ಮಳೆಗೆ ದ.ಕ ಜಿಲ್ಲೆ ತತ್ತರ-ಮನೆ, ದೇವಸ್ಥಾನಗಳಿಗೆ ನುಗ್ಗಿದ ನೀರು: ಪುತ್ತೂರಿಗೆ ಆಗಮಿಸಿದ NDRF ತಂಡ
ಮಂಗಳೂರು: ಒಂದು ವಾರಕ್ಕೆ ಮೊದಲೇ ಕರಾವಳಿಗೆ ಮಳೆ ಕಾಲಿಟ್ಟಿದ್ದು, ಎರಡು ದಿನಗಳಿಂದ ಸತತ ಸುರಿದ ಮಳೆಯಿಂದಾಗಿ ನದಿ, ಕಾಲುವೆಗಳಲ್ಲಿ ನೀರು ತುಂಬಿ ಹರಿದಿದೆ. ಮಂಗಳೂರಿನ ಕೊಡಿಯಾಲಬೈಲಿನಲ್ಲಿ ರಾಜಕಾಲುವೆಯಲ್ಲಿ ದಿಢೀರ್ ನೀರು ತುಂಬಿದ್ದರಿಂದ ಸೋಮವಾರ ಬೆಳಗ್ಗೆ ಆಸುಪಾಸಿನ ಮನೆಗಳಿಗೂ ನೀರು ನುಗ್ಗಿತ್ತು. ಕುದ್ರೋಳಿ ಭಗವತಿ ದೇವಸ್ಥಾನದ ಬಳಿಯಲ್ಲಿ ಮನೆಗಳ ಕಂಪೌಂಡ್ ಮತ್ತು ಕೆಲವು ಮನೆಗಳ ಒಳಗಡೆ ನೀರು ನುಗ್ಗಿದ್ದು ಜನರು ಪರದಾಟ ನಡೆಸಿದ್ದಾರೆ. ಕಾಲುವೆಗಳಲ್ಲಿ ಹೂಳೆತ್ತದೇ ಇರುವುದರಿಂದ ನೀರು ಸರಾಗ ಹರಿಯುವುದಕ್ಕೆ ತೊಡಕಾಗಿದೆ.
ಫಲ್ಗುಣಿ ನದಿ ತಟದ ಮರವೂರಿನಲ್ಲಿ ನೀರು ಹರಿಯುವ ತೋಡಿಗೆ ಮಣ್ಣು ತುಂಬಿದ್ದರಿಂದ ಕೃತಕ ನೆರೆ ಆವರಿಸಿದ್ದು, ಆಸುಪಾಸಿನ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಪಾಪ್ಯುಲರ್ ರೆಸಾರ್ಟ್ ಬಳಿಯಲ್ಲೇ ಮನೆಯೊಂದು ನೀರು ಆವರಿಸಿದ್ದರಿಂದ ಕೆಳಕ್ಕೆ ಕುಸಿದು ಹೋಗಿದ್ದು, ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಬಜಾಲ್ ಜಲ್ಲಿಗುಡ್ಡೆಯಲ್ಲಿ ನಿರಂತರ ಮಳೆಯಿಂದಾಗಿ ಕಾಲುವೆಯ ಗೋಡೆ ಕುಸಿದಿದ್ದು, ಆ ಭಾಗದಿಂದ ವಾಹನಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಸ್ಥಳೀಯರು ಹಿಂದಿನಿಂದಲೂ ಇಲ್ಲಿ ವಾಸಿಸುತ್ತಿದ್ದೇವೆ, ಈ ರೀತಿ ಆಗಿಲ್ಲ. ಮೊದಲ ಬಾರಿಗೆ ತಡೆಗೋಡೆ ಕುಸಿದು ಬಿದ್ದಿದೆ ಎಂದು ಅಲವತ್ತುಕೊಂಡಿದ್ದಾರೆ. ಬಜಾಲ್ ಅಳಪೆಯಲ್ಲಿ ರೈಲ್ವೇ ಅಂಡರ್ ಪಾಸ್ ನಲ್ಲಿ ಎಂದಿನಂತೆ ಈ ಬಾರಿಯೂ ನೀರು ಶೇಖರಗೊಂಡಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಎರಡೇ ದಿನಕ್ಕೆ ತುಂಬಿದ ಕುಮಾರಧಾರಾ
ಪಶ್ಚಿಮ ಘಟ್ಟ ಮತ್ತು ಕರಾವಳಿ ಭಾಗದಲ್ಲಿ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ನದಿಗಳು ತುಂಬಿ ಹರಿಯತೊಡಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿದ್ದು, ದೇವಸ್ಥಾನಕ್ಕೆ ಬರುವ ಯಾತ್ರಿಕರು ಸ್ನಾನ ಮಾಡುವ ಸ್ನಾನಘಟ್ಟ ಮುಳುಗಡೆಯಾಗಿದೆ. ಮುಂಗಾರು ಶುರುವಾದ ಎರಡೇ ದಿನದಲ್ಲಿ ಕುಮಾರಧಾರ ತುಂಬಿ ಹರಿದಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಸ್ನಾನಕ್ಕೆ ಬರುವ ಭಕ್ತರನ್ನು ನೀರಿಗಿಳಿಯದಂತೆ ಮತ್ತು ಅಪಾಯಕ್ಕೆ ಸಿಲುಕದಂತೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪುತ್ತೂರಿಗೆ ಎನ್ ಡಿಆರ್ ಎಫ್ ತಂಡ
ಇದೇ ವೇಳೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಮೇ 28ರ ವರೆಗೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿದೆ. ಈ ಕಾರಣದಿಂದ ವಿಕೋಪ ನಿರ್ವಹಣೆ ಸಲುವಾಗಿ ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ತಂಡಗಳನ್ನು ಕರೆಸಿಕೊಳ್ಳಲಾಗಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಭೂಕುಸಿತ ಅಪಾಯಗಳಿರುವುದರಿಂದ ಎನ್ ಡಿಆರ್ ಎಫ್ ತಂಡವನ್ನು ಪುತ್ತೂರಿನಲ್ಲಿ ಇರಿಸಲಾಗಿದ್ದರೆ, ಎಸ್ ಡಿಆರ್ ಎಫ್ ತಂಡವನ್ನು ಮಂಗಳೂರು ಮತ್ತು ಸುಬ್ರಹ್ಮಣ್ಯ ಭಾಗದಲ್ಲಿ ನಿಯೋಜನೆ ಮಾಡಲಾಗಿದೆ. ಉಳಿದಂತೆ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕಟ್ಟೆಚ್ಚರ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದೆ.
ಕೇರಳದ 11 ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೇರಳದ ಕಾಸರಗೋಡು, ಕಣ್ಣೂರು, ಕೊಟ್ಟಾಯಂ, ಕೋಜಿಕ್ಕೋಡ್, ವಯನಾಡ್, ಇಡುಕ್ಕಿ, ಪತ್ತನಂತಿಟ್ಟ ಸೇರಿ 11 ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ನಿರಂತರ ಮಳೆಯಾಗುತ್ತಿದ್ದು, ಮೇ 26ರ ಸೋಮವಾರ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಇದರ ಪ್ರಕಾರ 60ರಿಂದ 200 ಮಿಲ್ಲಿ ಮೀಟರ್ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ವಯನಾಡಿನಲ್ಲಿ ಭೀಕರ ಭೂಕುಸಿತ ಉಂಟಾಗಿದ್ದರಿಂದ 2-3 ಗ್ರಾಮಗಳ ಸಾವಿರಾರು ಜನರು ಅತಂತ್ರರಾಗಿದ್ದರು. ನೂರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.





