ಉಳ್ಳಾಲ: ಪಾದಚಾರಿ ಯುವತಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರಗೊಂಡಿದ್ದ ಸವಾರ ಮೃತ್ಯು
ಮಂಗಳೂರು: ಕಳೆದ ಡಿಸೆಂಬರ್ 2 ರಂದು ಸಂಜೆ ರಾ.ಹೆ. 66ರ ಕೊಲ್ಯದಲ್ಲಿ ಪಾದಚಾರಿ ಯುವತಿಗೆ ಬೈಕ್ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ಕುಂಪಲ ಆಶ್ರಯ ಕಾಲನಿ ನಿವಾಸಿ ವಿಜೇಶ್ (31)ಯಾನೆ ವಿಜಿ ಮೃತಪಟ್ಟ ಯುವಕ. ವಿಜೇಶ್ ಡಿ.2 ರಂದು ಕೊಲ್ಯ ಹೆದ್ದಾರಿಯಲ್ಲಿ ಬೈಕಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ವಿಜೇಶ್ ಮತ್ತು ಪಾದಚಾರಿ ಕೊಲ್ಯ ಸಾರಸ್ವತ ಕಾಲನಿ ದ್ವಾರಕಾ ನಗರ ನಿವಾಸಿ ಪಲ್ಲವಿ ಇಬ್ಬರೂ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ ವಿಜೇಶ್ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಪಲ್ಲವಿ ಸ್ಥಿತಿಯೂ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಮೃತ ವಿಜೇಶ್ ಅವಿವಾಹಿತನಾಗಿದ್ದು ಕಾರು ಟ್ಯಾಕ್ಸಿ ಚಲಾಯಿಸುವ ವೃತ್ತಿ ನಡೆಸುತ್ತಿದ್ದ. ಮೃತ ವಿಜೇಶ್ ತಾಯಿ, ತಂದೆ ಇಬ್ಬರು ಸಹೋದರರನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





