ಶಿರಾಡಿ ಘಾಟ್‌ನ ಗುಂಡ್ಯದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕನಿಗೆ ಗಂಭೀರ ಗಾಯ
ಗುಂಡ್ಯ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ಗುಂಡ್ಯ ಸಮೀಪದ ಕೊಡ್ಯಕಲ್ ಎಂಬಲ್ಲಿ ಇಂದು (ಮೇ 21) ಸಂಜೆ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾಗಿದೆ. ಸಂಜೆ 4.30 ಗಂಟೆಗೆ ಸುಮಾರಿಗೆ ನಡೆದ ಈ ದುರ್ಘಟನೆಯಲ್ಲಿ ಟ್ಯಾಂಕರ್ ಚಾಲಕ, ಬಬ್ಲಿ ಯಾದವ್ ಎಂಬುವವರು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಅನಿಲ ಸಾಗಾಟ ಮಾಡುತ್ತಿದ್ದ ಈ ಟ್ಯಾಂಕರ್, ಗುಂಡ್ಯ ಸಮೀಪದ ಕೊಡ್ಯಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಘಟನೆಯಲ್ಲಿ ಚಾಲಕ ಬಬ್ಲಿ ಯಾದವ್ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್, ಟ್ಯಾಂಕರ್‌ನಿಂದ ಯಾವುದೇ ರೀತಿಯ ಅನಿಲ ಸೋರಿಕೆ ಸಂಭವಿಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಹೆದ್ದಾರಿಯ ಒಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
ಸ್ಥಳಕ್ಕೆ ನೆಲ್ಯಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು.





