2025 ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗೆ ಭಾಜನರಾದ ಭಾನು ಮುಷ್ತಾಕ್: ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಕೃತಿ
ಲಂಡನ್: ಕನ್ನಡದ ಲೇಖಕಿ, ಪ್ರಗತಿಪರ ಚಿಂತಕಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನಕ್ಕೆ 2025 ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಕೃತಿ ಎಂಬ ಹೆಗ್ಗಳಿಕೆಗೆ ಅವರ “ಹಾರ್ಟ್ ಲ್ಯಾಂಪ್” ಕೃತಿ ಭಾಜನವಾಗಿದೆ.
ಮಂಗಳವಾರ ರಾತ್ರಿ ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ಬಾನು ಮುಷ್ತಾಕ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಮ್ಮ ಕೃತಿಯನ್ನು ಇಂಗ್ಲಿಷ್ ಅನುವಾದಿಸಿ ದೀಪಾ ಬಸ್ತಿ ಅವರಿಗೆ ಬಾನು ಮುಷ್ತಾಕ್ ಕೃತಜ್ಞತೆ ತಿಳಿಸಿದರು.
ವಿಶ್ವಾದ್ಯಂತ ಒಟ್ಟಾರೆ ಆರು ಕೃತಿಗಳನ್ನು ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿ ಪಡೆದಿದೆ.
ವಿಜೇತರಿಗೆ 50,000 ಪೌಂಡ್ ಬಹುಮಾನ ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಪ್ರಶಸ್ತಿಯ ಅಂತಿಮ ಘಟ್ಟಕ್ಕೆ ಆರು ಕೃತಿಗಳು ತಲುಪಿದ್ದವು. ಅವುಗಳ ಪೈಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯಕ್ಕೆ ವಿಶ್ವ ವೇದಿಕೆಯಲ್ಲಿ ಮಹತ್ವದ ಸ್ಥಾನ ದೊರೆತಂತಾಗಿದೆ.
ʼಹಾರ್ಟ್ ಲ್ಯಾಂಪ್ʼ ಕೃತಿ ಈ ಹಿಂದೆ ಲಾಂಗ್ ಲಿಸ್ಟ್‌ಗೆ ಆಯ್ಕೆಯಾಗಿತ್ತು. ಬಾನು ಮುಷ್ತಾಕ್‌ರ ಈ ಕಥಾ ಸಂಕಲನವನ್ನು ದೀಪಾ ಭಸ್ತಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ʼಹಾರ್ಟ್ ಲ್ಯಾಂಪ್ʼ ಕಳೆದ ವರ್ಷ ಪೆನ್ ಟ್ರಾನ್ಸ್‌ಲೇಟ್ಸ್ ಪ್ರಶಸ್ತಿಯನ್ನೂ ಪಡೆದಿತ್ತು.
ಅಂತಿಮ ಹಂತದಲ್ಲಿದ್ದ ಆರು ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಎರಡು ಫ್ರೆಂಚ್ ಮತ್ತು ಡ್ಯಾನಿಶ್, ಇಟಾಲಿಯನ್, ಕನ್ನಡ ಮತ್ತು ಜಪಾನೀ ಭಾಷೆಯ ತಲಾ ಒಂದು ಕೃತಿಗಳಿದ್ದವು.





