ಧರ್ಮಸ್ಥಳ ಮೂಲದ ಆಕಾಂಕ್ಷ ಪಂಜಾಬ್‌ನಲ್ಲಿ ಸಾವು ಪ್ರಕರಣ: ಪ್ರೊಫೆಸರ್ ಬಂಧನ
ಧರ್ಮಸ್ಥಳ: ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಆಕಾಂಕ್ಷ ಸಾವು ಪ್ರಕರಣದಲ್ಲಿ ಪ್ರೊಫೆಸರ್ ಒಬ್ಬನನ್ನು ಜಲಂಧರ್ ಪೊಲೀಸರು ಬಂಧಿಸಿದ್ದಾರೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ(45) ಬಂಧಿತ ಆರೋಪಿ. ಆಕಾಂಕ್ಷ ಸಾವಿಗೆ ಯೂನಿವರ್ಸಿಟಿಯ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಕಾರಣ ಎಂದು ಜಲಂಧರ್ ಪೊಲೀಸ್ ಠಾಣೆಗೆ ಆಕಾಂಕ್ಷ ಹೆತ್ತವರು ದೂರು ನೀಡಿದ್ದರು. ಆಕಾಂಕ್ಷ ಮೊಬೈಲ್ ಪಡೆದು ತನಿಖೆ ನಡೆಸಿರುವ ಪೊಲೀಸರಿಗೆ ಸಾವಿಗೂ ಮುನ್ನ ಆಕಾಂಕ್ಷ, ಬಿಜಿಲ್ ಮಾಥ್ಯೂಗೆ ತಾನು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಮೆಸೇಜ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಅಲ್ಲದೇ ಆಕಾಂಕ್ಷ ಆತ್ಮಹತ್ಯೆಯ ಬಳಿಕ ಬಿಜಿಲ್ ಮಾಥ್ಯೂ ತಲೆಮರಿಸಿಕೊಂಡಿದ್ದ. ಇದೀಗ ಜಲಂಧರ್ ಪೊಲೀಸರು ಬಿಜಲ್ ಮ್ಯಾಥ್ಯೂನನ್ನು ಬಂಧಿಸಿದ್ದಾರೆ. ಕಾಲೇಜಿನಿಂದ ಕೂಡ ಮ್ಯಾಥ್ಯೂನನ್ನು ಅಮಾನತು ಮಾಡಲಾಗಿದೆ.
ಧರ್ಮಸ್ಥಳದ ಬೊಳಿಯೂರು ನಿವಾಸಿ ಆಕಾಂಕ್ಷ ಎಸ್ ನಾಯರ್ 6 ತಿಂಗಳ ಹಿಂದೆ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಹೆಚ್ಚಿನ ತರಬೇತಿಗೆ ಜರ್ಮನಿಗೆ ತೆರಳಲು ತಯಾರಿ ನಡೆಸಿದ್ದ ಆಕಾಂಕ್ಷ ಕೆಲವು ಶೈಕ್ಷಣಿಕ ದಾಖಲೆಗಳನ್ನು ಶುಕ್ರವಾರ ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗೆ ತೆರಳಿದ್ದಳು. ಬಳಿಕ ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು.
ಆಕಾಂಕ್ಷಗೆ ತಾನು ಓದುತ್ತಿದ್ದ ಯೂನಿವರ್ಸಿಟಿಯ ಪ್ರೊಫೆಸರ್ ಕೇರಳದ ಕೊಟ್ಟಾಯಂ ನಿವಾಸಿ ಎರಡು ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯೂ ಜೊತೆ ಪ್ರೇಮಾಂಕುರವಾಗಿತ್ತು. ಅಲ್ಲದೇ ಮ್ಯಾಥ್ಯೂ ಜೊತೆ ಆತನ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಆಕಾಂಕ್ಷ ಜಗಳ ಮಾಡಿದ್ದಳು. ಬಳಿಕ ಕಾಲೇಜಿನಲ್ಲೂ ಜಗಳ ಮಾಡಿ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆಕಾಂಕ್ಷ ಮೃತದೇಹವನ್ನು ಮೇ 19 ರಂದು ಮಧ್ಯಾಹ್ನ ಮರಣೋತ್ತರ ಪರೀಕ್ಷೆ ಮಾಡಿದ್ದು, ರಾತ್ರಿ ಮನೆಯವರಿಗೆ ಸರಕಾರಿ ಆಸ್ಪತ್ರೆಯವರು ಬಿಟ್ಟುಕೊಟ್ಟಿದ್ದಾರೆ. ಆಂಬುಲೆನ್ಸ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ರಾತ್ರಿ 2 ಗಂಟೆಗೆ ತೆಗೆದುಕೊಂಡು ಬಂದಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಿಂದ ಆಕಾಂಕ್ಷ ಕೆಲಸ ಮಾಡುತ್ತಿದ್ದ ಕಂಪನಿಯ ವತಿಯಿಂದ ವಿಮಾನ ವ್ಯವಸ್ಥೆ ಮಾಡಿದ್ದು, ಅದರಂತೆ ಮೇ 20 ರಂದು ರಾತ್ರಿ 8 ಗಂಟೆಗೆ ಸ್ಪೈಸ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರಾತ್ರಿ 11 ಗಂಟೆಗೆ ಬರಲಿದ್ದು, ಅಲ್ಲಿಂದ ಧರ್ಮಸ್ಥಳ ಬೊಳಿಯರ್ ಮನೆಗೆ ಆಂಬುಲೆನ್ಸ್ ಮೂಲಕ ಮೇ 21 ರಂದು ಬೆಳಗ್ಗೆ ಮೃತದೇಹ ಬರಲಿದೆ.





