December 18, 2025

ಮಂಗಳೂರು: ವಿದೇಶದಲ್ಲಿ ಉದ್ಯೋಗ ನೇಮಕಾತಿ ಹೆಸರಿನಲ್ಲಿ ವಂಚನೆ: ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ ಎಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು

0
images.jpeg

ಮಂಗಳೂರು: ವಿದೇಶದಲ್ಲಿ ಉದ್ಯೋಗಕ್ಕಾಗಿ ನೇಮಕಾತಿ ಮಾಡಿಸುವ ಅಕ್ರಮ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ ಎಸಗಿದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿ ಗಳನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ವಿದೇಶದಲ್ಲಿ ಉದ್ಯೋಗಕ್ಕಾಗಿ ನೇಮಕಾತಿ ಹೆಸರಿನಲ್ಲಿ ವಂಚನೆ ನಡೆಸಿರುವ ಏಜೆನ್ಸಿಗಳ ಬಗ್ಗೆ ಮುನ್ಸೂಚನೆಯ ಹೊರತಾಗಿಯೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಸೋಮಶೇಖರ್ ಜಿ.ಸಿ. ಮತ್ತು ಬರ್ಕೆ ಪೊಲೀಸ್ ಠಾಣೆಯ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್. ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೈರ್‌ಗ್ಲೋ ಎಲಿಗೆಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬಗ್ಗೆ ಹಿಂದೆ ದೂರುಗಳು ಹಾಗೂ ಸಂಬಂಧಪಟ್ಟ ಇಲಾಖೆಯ ನಿರ್ದೇಶನದ ಹೊರತಾಗಿಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಮಂಗಳೂರು ಪೂರ್ವ ಠಾಣೆಯ ಇನ್ಸ್‌ಪೆಕ್ಟರ್ ಸೋಮಶೇಖರ್ ಜಿ.ಸಿ. ವಿಫಲರಾಗಿದ್ದಾರೆ. ಅವರ ನಿಷ್ಕ್ರಿಯತೆ ಹಾಗೂ ಮೇಲ್ವಿಚಾರಣೆಯ ಕೊರತೆಯ ಕಾರಣದಿಂದ ಆರೋಪಿ ತನ್ನ ವಂಚನೆ ಮುಂದುವರಿಸಿದ ಪರಿಣಾಮವಾಗಿ ಹಲವು ಉದ್ಯೋಗಾಕಾಂಕ್ಷಿಗಳಿಂದ 1.82 ಕೋಟಿ ರೂ.ಗಳಿಗೂ ಅಧಿಕ ವಂಚನೆ ಮಾಡಲು ಅವಕಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಬರ್ಕೆ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ಹಾಗೂ ಹಿಂದೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್. ಅವರನ್ನು ಕೂಡಾ ಬಹು ತನಿಖಾ ಲೋಪಗಳಿಗಾಗಿ ಅಮಾನತುಗೊಳಿಸಲಾಗಿದೆ. ಆರೋಪಿಯ ಬಂಧನಕ್ಕೆ ವಿಫಲ, ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುವುದು, ಸಂತ್ರಸ್ತರು ಮತ್ತು ಮತ್ತು ಸಾಕ್ಷಿಗಳ ಪರಿಶೀಲನೆ ಹಾಗೂ ಹಣಕಾಸಿನ ಸುಳಿವುಗಳ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿರುವ ಕಾರಣ ಪ್ರಕರಣದ ತನಿಖೆಗೆ ತೊಂದರೆಯಾಗಿದೆ. ಇಬ್ಬರೂ ಅಧಿಕಾರಿಗಳು ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ಕರ್ತವ್ಯ ಉಲ್ಲಂಘನೆಯನ್ನು ಪ್ರದರ್ಶಿಸಿದ್ದಾರೆ. ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!