ಬಂಟ್ವಾಳ: ಯುವಕನಿಗೆ ಚೂರಿ ಇರಿತ ಪ್ರಕರಣ-ಸ್ಥಳಕ್ಕೆ ಎಸ್ಪಿ ಭೇಟಿ: ಹಲವು ಮಂದಿ ಪೊಲೀಸ್ ವಶಕ್ಕೆ
ಬಂಟ್ವಾಳ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಕ್ಕರಂಗಡಿ ನಿವಾಸಿ ಹಮೀದ್ ಎಂಬವರಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಸ್.ಪಿ.ಯತೀಶ್ ಎನ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ಸಂಪೂರ್ಣ ಮಾಹಿತಿ ಪಡೆದುಕೊಂಡು ಆರೋಪಿಗಳ ಶೀಘ್ರ ಬಂಧನಕ್ಕೆ ಸೂಚನೆ ನೀಡಿದ್ದಾರೆ.
ವೈಯಕ್ತಿಕ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಈ ಹಿಂದೆ ಗಲಾಟೆಗಳು ನಡೆದಿದೆ. ಅದರ ಮುಂದುವರಿದ ಭಾಗವಾಗಿ ಕೊಲೆ ಯತ್ನ ನಡೆದಿದೆಯಾ? ಎಂಬ ಸಂಶಯ ಪೊಲೀಸರಿಗೆ ವ್ಯಕ್ತವಾಗಿದ್ದು, ಇದಕ್ಕೆ ಪೂರಕವಾಗಿ ಹಾಗೂ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ಪ್ರಾರಂಭವಾಗಿದ್ದು, ಈಗಾಗಲೇ ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನೈಜ ಆರೋಪಿಗಳ ಪತ್ತೆ ಕಾರ್ಯಕ್ಕೆ ಎಸ್.ಪಿ.ಅವರ ನಿರ್ದೇಶನದಂತೆ ಬಂಟ್ವಾಳ ಡಿ.ವೈ.ಎಸ್.ಪಿ.ಯವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳು ಪ್ರಕರಣದ ತನಿಖೆ ಆರಂಭಿಸಿದೆ.
ಗಾಯಗೊಂಡ ಹಮೀದ್ ಮ೦ಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ.





