ಬೆಳ್ತಂಗಡಿ: ಮುಸ್ಲಿಮರ ವಿರುದ್ದ ಶಾಸಕ ಹರೀಶ್ ಪೂಂಜ ದ್ವೇಷ ಭಾಷಣ: ತೆಕ್ಕಾರು ಗೋಪಾಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿಯೇ ಗ್ರಾಮದ ಮಸ್ಲಿಮರ ವಿರುದ್ದ ಅವಹೇಳನಕಾರಿ ಹೇಳಿಕೆ
ಬೆಳ್ತಂಗಡಿ: ತೆಕ್ಕಾರಿನ ಕಂಟ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ಊರಿನ ಮುಸ್ಲಿಮರ ವಿರುದ್ದ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಘಟನೆ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ನಡೆದಿದೆ.
ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚಿನ ಮುಸ್ಲಿಮರು ವಾಸವಿರುವ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿಯೇ ಮುಸ್ಲಿಮರ ವಿರುದ್ದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನಾಲಗೆ ಹರಿಯಬಿಟ್ಟಿದ್ದಾರೆ.
ನೀವು (ಹಿಂದುಗಳು) ಈ ತೆಕ್ಕಾರಿನಲ್ಲಿ ಇರುವುದು 150 ಮನೆಗಳು, ಒಂದುಸಾವಿರದ ಇನ್ನೂರು ಕುಟುಂಬಗಳಿರುವುದು ಮುಸ್ಲಿಮರದ್ದು, ಇನ್ನು ಒಂದು ಹತ್ತು ವರ್ಷ ಕಳೆದರೆ 1200 ಇರುವ ಮುಸ್ಲಿಮರ ಸಂಖ್ಯೆ 600 ಕ್ಕೆ ಇಳಿವುದಿಲ್ಲ, ಇನ್ನು ಹತ್ತು ವರ್ಷ ಕಳೆದರೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5000 ದಿಂದ 10000 ಆಗುತ್ತದೆ ಎಂದು ಹೇಳುವ ಮೂಲಕ ಸ್ಥಳೀಯ ಹಿಂದುಗಳನ್ನು ಮುಸ್ಲಿಮರ ವಿರುದ್ದ ಎತ್ತಿಕಟ್ಟುವ ಮೂಲಕ ಗ್ರಾಮದ ಸಾಮರಸ್ಯವನ್ನು ಕೆಡಲು ಹರೀಶ್ ಪೂಂಜ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ತೆಕ್ಕಾರು ಗ್ರಾಮದ ಮುಸ್ಲಿಮರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಮುಸ್ಲಿಮರ ನಡುವೆ 70 ರಿಂದ 74 ಜಾತಿಗಳಿವೆ ಎಂಬ ಗಂಭೀರ ಆರೋಪ ಮಾಡಿರುವ ಶಾಸಕರು ಜಾತಿ ವೈಷಮ್ಯವನ್ನು ಹುಟ್ಟುಹಾಕಿದ್ದಾರೆ ಎನ್ನಲಾಗಿದೆ.
ಗೃಹ ಸಚಿವರು ಜಿಲ್ಲೆಗೆ ಆಗಮಿಸಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಹೋದರು ಪ್ರಚೋದನಕಾರಿ ಭಾಷಣಗಳಿಗೆ ಯಾವುದೇ ಕಡಿವಾಣ ಹಾಕಲು ಇಲ್ಲಿನ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಇನ್ನು ಮುಂದೆ ಯಾವುದೇ ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ಇಲ್ಲ, ಆ್ಯಂಟಿ ಕಮ್ಯುನಲ್ ಟಾಸ್ಕ್ಫೋರ್ಸ್ ಸ್ಥಾಪಿಸಿ ಉದ್ರೇಕಕಾರಿ ಭಾಷಣ ಮಾಡುವವರನ್ನು ಹದ್ದುಬಸ್ತಿನಲ್ಲಿಡುತ್ತೇವೆ ಅಂತ ಗೃಹ ಸಚಿವರು ಹೇಳಿಕೆ ಕೊಟ್ಟ ತಾಸುಗಳಲ್ಲೇ ಬೆಳ್ತಂಗಡಿಯ ಶಾಸಕ ಯಾವುದೇ ಕಾನೂನಿನ ಭಯ ಇಲ್ಲದೆ ಮುಸ್ಲಿಮರ ವಿರುದ್ದ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿಯೇ ನೀಡುತ್ತಾರೆ.




