ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: 8 ಮಂದಿ ಆರೋಪಿಗಳ ಬಂಧನ
ಮಂಗಳೂರು: ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝ್ವಾನ್ ಮತ್ತು ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಪರಮೇಶ್ವರ್, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಯಾವುದೇ ಸಮುದಾಯದವರನ್ನು ಕಾನೂನು ಉಲ್ಲಂಘನೆ ಮಾಡಲು ಬಿಡಲ್ಲ. ಎಲ್ಲಾ ತರದ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ದ.ಕ ಉಡುಪಿ ಜಿಲ್ಲೆ ಹಲವು ವರ್ಷಗಳಿಂದ ಕೋಮುವಾದದಿಂದ ಅನೇಕ ಸಂದರ್ಭ ದೇಶದ ಗಮನ ಸೆಳೆದಿದೆ. ಈ ಬಾರಿ ಘಟನೆ ನಡೆದ ಮೇಲೆ ಉಭಯ ಜಿಲ್ಲೆಯಲ್ಲಿ ಹಳೆಯ ಮರುಕಳಿಸಿದೆ. ಜನಸಮುದಾಯ ಇದನ್ನು ಇಷ್ಟಪಡುವುದಿಲ್ಲ. ಪೊಲೀಸ್ ಇಲಾಖೆ ಸರ್ಕಾರ ಉಭಯ ಜಿಲ್ಲೆಯ ಶಾಂತಿಗಾಗಿ ಕ್ರಮ ಕೈಗೊಂಡಿದೆ. ಈ ಎರಡು ಘಟನೆಯಿಂದ ಅಶ್ರಫ್ ಮತ್ತು ಸುಹಾಸ್ ಹತ್ಯೆ ಕೋಮು ಸೌಹಾರ್ದಕ್ಕೆ ಸವಾಲಾಗಿ ನಿಂತಿದೆ. ಸುಹಾಸ್ ಹತ್ಯೆಯಲ್ಲಿ ಎಂಟು ಜನರ ಬಂಧನ ಹಾಗೂ ಅಶ್ರಫ್ ಕೇಸ್ 21 ಜನರ ಬಂಧನವಾಗಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಹಾಳು ಮಾಡುವ ದುಷ್ಟ ಶಕ್ತಿಗಳನ್ನು ಬಿಡುವುದಿಲ್ಲ. ಯಾವ ಕೋಮು ಶಕ್ತಿಗಳು ಯಾವುದೇ ಸಮುದಾಯಕ್ಕೆ ಸೇರಿದ್ದರು ಕಾನೂನು ಉಲ್ಲಂಘಿಸಲು ಬಿಡುವುದಿಲ್ಲ ಹತ್ತಿಕ್ಕುತ್ತೇವೆ ಎಂದು ಹೇಳಿದ್ದಾರೆ.
ಈ ಭಾಗ ಶಾಂತಿಯಲ್ಲಿರಬೇಕು, ಈ ಹಿಂದೆ ನಾವು ಸೌಹಾರ್ದತೆಗಾಗಿ ಪಾದಯಾತ್ರೆ ಮಾಡಿದ್ದೆವು, ಆಗ ಜನರಿಗೆ ಅರ್ಥ ಆಗಿ ಸುಮಾರು ವರ್ಷ ಯಾವುದೇ ಘಟನೆ ನಡೀತಿರಲಿಲ್ಲ, ಈಗ ಮರುಕಳಿಸುತ್ತಿದೆ. ಇದರ ಹಿಂದಿರುವ ಶಕ್ತಿಗಳನ್ನು ಹುಟ್ಟಡಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.




