ಮಂಗಳೂರು ಗುಂಪು ಹತ್ಯೆ ಪ್ರಕರಣ: ಕೇರಳದ ಅಶ್ರಫ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕ್ಕೆ ಎಸ್ಡಿಪಿಐ ಆಗ್ರಹ
ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ ಎ.27ರಂದು 30ಕ್ಕೂ ಅಧಿಕ ಮಂದಿಯ ಗುಂಪೊಂದು ಥಳಿಸಿ ಹತ್ಯೆಯಾದ ಕೇರಳದ ಅಶ್ರಫ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಲು ಎಸ್ ಡಿಪಿಐ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ, ಕೊಲೆಯ ಕಿಂಗ್ ಪಿನ್ ರವೀಂದ್ರ ನಾಯ್ಕ್ ಮತ್ತು ಶಾಸಕ ಭರತ್ ಶೆಟ್ಟಿ ಘಟನೆ ನಡೆದ ದಿನ ಠಾಣೆಗೆ ಭೇಟಿ ನೀಡಿ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರು ಎಂದು ಆರೋಪಿಸಿದರು.
ಈ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಸಮಿಶ್ರ ಸರಕಾರವಿದೆಯೇ, ಗೃಹಮಂತ್ರಿ ವಯೋವೃದ್ಧ ಕಾಯಿಲೆ ತುತ್ತಾಗಿ ಮತಿಭ್ರಮಣೆ ಉಂಟಾಗಿದೆಯೇ, ಬಿಜೆಪಿ ಸರಕಾರಕ್ಕೆ ಕಾಂಗ್ರೆಸ್ ಸರಕಾರ ಆಹಾರ ಮಾಡಿಕೊಡುತ್ತಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಗೃಹಸಚಿವರಲ್ಲಿ ರಾಜೀನಾಮೆ ಪಡೆಯಬೇಕು ಹಾಗೂ ಹೇಳಿಕೆ ಹಿಂಪಡೆಯಬೇಕು ಎಂದರು.
ಪಹಲ್ಗಾಂ ದಾಳಿಯ ಬಿಸಿ ಆರುವ ಮುನ್ನವೇ ಈ ಕೃತ್ಯ ವಿಷಾದನೀಯ. ದ.ಕ ಜಿಲ್ಲೆಯಲ್ಲಿ 15 ದಿನದೊಳಗೆ ಇದು ಎರಡನೇ ಕೃತ್ಯ. ಆಟೋ ಚಾಲಕನ ಕೊಲೆಯನ್ನು ಒಬ್ಬರ ತಲೆಗೆ ಕಟ್ಟಿ ಮುಚ್ಚಿ ಹಾಕುತ್ತಾರೆ. ಆದರೆ ಗೃಹ ಇಲಾಖೆ ಯಾರ ಅಣತಿಯಂತೆ ಕಾರ್ಯಾಚರಿಸುತ್ತಿದೆ ಎಂದು ಪ್ರಶ್ನಿಸಿದರು.
ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, ವಿಕೆಟಿನ ಚೂಪು ಭಾಗದಿಂದ ಅಶ್ರಫ್ ಅವರಿಗೆ ಚುಚ್ಚಲಾಗಿದೆ. ಬರಿ ಕೈಯ್ಯಿಂದ ಹೊಡೆದದ್ದಲ್ಲ. ಪೈಪ್ ನಿಂದ ಹೊಡೆಯಲಾಗಿದೆ ಎಂದು ಆರೋಪಿಸಿದರು.
ಪಹಲ್ಗಾಂ ಮತ್ತು ಈ ಘಟನೆ ಎರಡೂ ಒಂದೇ. ಸಂಘಪರಿವಾರದ ವಿಷಕಾರಿ ಮನಸ್ಸಿಗೆ ಮಾತ್ರ ಹೀಗೆ ಮಾಡಲು ಸಾಧ್ಯ. ನಮಗೆ ಪೊಲೀಸ್ ನಡೆಯಲ್ಲಿ ಸಂಶಯವಿದೆ. ಸರ್ಕಾರದ ಸಚಿವರ ಮೇಲೆ ಸಂಶಯವಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಜನಿವಾರಕ್ಕೆ ಕೊಡುವ ಮೌಲ್ಯ ಜೀವಕ್ಕಿಲ್ಲ ಎಂದು ಹೇಳಿದರು.
ಉತ್ಸವಗಳಿಗೆ ಬರುವ ಉಸ್ತುವಾರಿ ಸಚಿವರಿಗೆ ಮಂಗಳೂರಿಗೆ ಬರುವ ಸಮಯವಿಲ್ಲ. ಶರಣ್ ಪಂಪ್ವೆಲ್ ವಿರುದ್ಧ ಮಾತಾಡಿದಾಗ ಎಫ್ ಐ ಆರ್ ಮಾಡುವ ಪೊಲೀಸರು, ಯಾಕೆ ಇದನ್ನು ತಡ ಮಾಡಿದರು ಎಂದು ಪ್ರಶ್ನಿಸಿದರು.
ಸ್ಥಳೀಯ ಇನ್ಸ್ ಪೆಕ್ಟರ್ ಗೆ ಹತ್ಯೆ ಬಗ್ಗೆ ಮೊದಲೇ ಗೊತ್ತಿತ್ತು, ಆದರೆ ಅವರು ಮುಚ್ಚಿಟ್ಟಿದ್ದಾರೆ. ಮೃತ ಕುಟುಂಬಕ್ಕೆ 50 ಲಕ್ಷ ಪರಿಹಾರ ಸರಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.





