December 15, 2025

ಮಂಗಳೂರು: ಗುಂಪು ಹತ್ಯೆ ಪ್ರಕರಣ: ತನಿಖಾ ಅಧಿಕಾರಿ ಮೇಲೆ ಕರ್ತವ್ಯಲೋಪ ಆರೋಪ

0
dineshgundurao-k11E-621x414@LiveMint.jpg

ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ ಎ.27ರಂದು 30ಕ್ಕೂ ಅಧಿಕ ಮಂದಿಯ ಗುಂಪೊಂದು ಥಳಿಸಿ ಹತ್ಯೆಗೈದ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರನ್ನು ಸೇವೆಯಿಂದ ಅಮಾನತು ಮಾಡಿ, ಉನ್ನತಮಟ್ಟದ ತನಿಖೆ ನಡೆಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ್ ಚಿತ್ರಾಪುರ ಅವರು ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಮಾಹಿತಿ ಇದ್ದರೂ ಕೂಡ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಹಾಗಾಗಿ, ಅಮಾನತು ಮಾಡಿ, ಉನ್ನತ ಮಟ್ಟದ ತನಿಖೆ ನಡೆಸಲು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇನ್ಸ್ಪೆಕ್ಟರ್ ಅಮಾನತು ಮಾಡಿ, ಉನ್ನತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂರಾವ್, “ದಿನಾಂಕ : 27.04.2025 ರಂದು ಸಂಜೆ ಮಂಗಳೂರು ನಗರ ಹೊರ ವಲಯದ ಕುಡುಪು ಎಂಬಲ್ಲಿ ಉತ್ತರ ಭಾರತದ ವ್ಯಕ್ತಿಯೊಬ್ಬರ ಮೈ ಮೇಲಿನ ಬಟ್ಟೆಗಳನ್ನು ಬಿಚ್ಚಿ. ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಸ್ಥಿತಿಯಲ್ಲಿ ಮೃತ ಶರೀರವು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಮೃತ ದೇಹದ ಮೇಲೆ ಯಾರೋ ಹಲ್ಲೆ ನಡೆಸಿ ಗಂಭೀರ ಗಾಯಗಳು ಉಂಟಾಗಿರುವುದು ಕಂಡು ಬಂದರೂ ಸಹ ಪೊಲೀಸ್ ನಿರೀಕ್ಷಕರು ಕೂಡಲೇ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳದೇ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶ ಕೊಲೆ ಪ್ರಕರಣವನ್ನು ಯುಡಿಆರ್ ಪ್ರಕರಣವೆಂದು ದಾಖಲಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿ, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರನ್ನು ಶೀಘ್ರ ಅಮಾನತ್ತು ಮಾಡಿ, ಉನ್ನತ ಮಟ್ಟದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿರುತ್ತಾರೆ. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಮುಂದಿನ ಅಗತ್ಯ ಕ್ರಮ ಕೈಗೊಳ್ಳಿ” ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!