December 15, 2025

ಹಾಸನ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ : ಅವಿಶ್ವಾಸಕ್ಕೆ ಮಂಡಿಸಿ ಮುಖಭಂಗ ಅನುಭವಿಸಿದ ಜೆಡಿಎಸ್

0
image_editor_output_image-421517128-1745834598367

ಹಾಸನ: ಹಾಸನ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ವಿರುದ್ಧ ಜೆಡಿಎಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲಗೊಂಡಿದ್ದು, ಜೆಡಿಎಸ್‌ಗೆ ಭಾರೀ ಮುಖಭಂಗವಾಗಿದೆ.

ಕುವೆಂಪು ಸಭಾಂಗಣದಲ್ಲಿ ನಡೆದ ಮತದಾನದಲ್ಲಿ ಅವಿಶ್ವಾಸಕ್ಕೆ ಬೇಕಾದ 26 ಸದಸ್ಯರ ಬೆಂಬಲ ಜೆಡಿಎಸ್‌ಗೆ ಒಟ್ಟುಗೂಡದ ಕಾರಣ, ಕೇವಲ 21 ಮತಗಳೊಂದಿಗೆ ಅವಿಶ್ವಾಸ ನಿರ್ಣಯ ಸೋಲು ಕಂಡಿದೆ.ಅವಿಶ್ವಾಸ ನಿರ್ಣಯಕ್ಕೆ 5 ಸದಸ್ಯರ ಕೊರತೆಯಿಂದ ಜೆಡಿಎಸ್‌ ತನ್ನ ರಾಜಕೀಯ ತಂತ್ರದಲ್ಲಿ ಹಿನ್ನಡೆ ಅನುಭವಿಸಿದೆ.

ಈ ಮೂಲಕ ಹಾಲಿ ಅಧ್ಯಕ್ಷ ಎಂ.ಚಂದ್ರೇಗೌಡ ಜೆಡಿಎಸ್‌ ಹೈಕಮಾಂಡ್‌ಗೆ ಸೆಡ್ಡು ಹೊಡೆದು ಅಧಿಕಾರದಲ್ಲಿ ಮುಂದುವರಿದಿದ್ದಾರೆ.ಈ ಗೆಲುವಿನಲ್ಲಿ ಬಿಜೆಪಿಯ ಪ್ರೀತಂ ಗೌಡ ಮತ್ತು ಕಾಂಗ್ರೆಸ್‌ನ ಸಂಸದ ಶ್ರೇಯಸ್‌ ಪಟೇಲ್‌ ಜೋಡಿಯ ರಾಜಕೀಯ ಚಾಣಾಕ್ಷತನ ಮತ್ತೆ ಮೇಲುಗೈ ಸಾಧಿಸಿದೆ. ಜೆಡಿಎಸ್‌ನ ಯೋಜನೆಯನ್ನು ವಿಫಲಗೊಳಿಸಿ, ಚಂದ್ರೇಗೌಡರನ್ನು ಅಧಿಕಾರದಲ್ಲಿ ಉಳಿಸಿಕೊಂಡಿರುವ ಈ ಜೋಡಿ, ಹಾಸನದ ರಾಜಕೀಯ ವಲಯದಲ್ಲಿ ತಮ್ಮ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಹಾಜರಿದ್ದ ಒಟ್ಟು 38 ಸದಸ್ಯರಲ್ಲಿ 37 ಮತ ಚಲಾವಣೆಯಾಗಿದ್ದು ಅಧ್ಯಕ್ಷ ಚಂದ್ರೇಗೌಡ ತಟಸ್ಥರಾಗಿ ಉಳಿದರು. ಅವಿಶ್ವಾಸ ಪರ 21, ವಿರುದ್ಧ 16 ಮತ ಚಲಾವಣೆಯಾದವು.

ಅವಿಶ್ವಾಸಕ್ಕೆ ಸೋಲಾದ ನಂತರ ಬಿಜೆಪಿ, ಕಾಂಗ್ರೆಸ್ ಸದಸ್ಯರು, ಸಂಸದರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು. ಸಭಾಂಗಣದ ಹೊರಗಡೆ ಶ್ರೇಯಸ್ ಪಟೇಲ್, ಪ್ರೀತಂಗೌಡ ಪರ ಜೈಕಾರ ಕೂಗಿ ಬಿಜೆಪಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!