ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ಪ್ರಕರಣ: ಪಿಯುಸಿ ವಿದ್ಯಾರ್ಥಿ ಅಭಿಜಯ್ ನನ್ನು ಬೆನ್ನ ಮೇಲೆ ಹೊತ್ತುಕೊಂಡು ತೆರಳಿದ ಮುಸ್ಲಿಂ ಯುವಕ
ನವದೆಹಲಿ: ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಮ್ಮ ಮಗ 97% ಅಂಕ ಗಳಿಸಿದ್ದ ಹೀಗಾಗಿ ಸಂಭ್ರಮಾಚರಣೆ ಮಾಡಲು 48 ವರ್ಷದ ಮಂಜುನಾಥ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ಹೋಗಿದ್ದರು. ಈ ವೇಳೆ ಭಯೋತ್ಪಾದಕರ ದಾಳಿಗೆ ಮಂಜುನಾಥ್ ದುರಂತ ಅಂತ್ಯ ಕಂಡಿದ್ದಾರೆ.
ಈ ನಡುವೆ ಭಯೋತ್ಪಾದಕರ ಗುಂಡಿನ ದಾಳಿ ವೇಳೆ ಶಿವಮೊಗ್ಗದ ಮೃತ ಮಂಜುನಾಥ್ ಅವರ ಪುತ್ರ ಅಭಿಜಯ್ನ್ನು ಸ್ಥಳೀಯ ಮುಸ್ಲಿಮ್ ಯುವಕರು ರಕ್ಷಿಸಿದ್ದೇ ರೋಚಕವಾಗಿದೆ.
ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಅಭಿಜಯ್ನನ್ನ ಸ್ಥಳೀಯ ವ್ಯಕ್ತಿಯೊಬ್ಬ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮಂಜುನಾಥ್ ಪತ್ನಿ ಪಲ್ಲವಿ, ಮನನ್ನ ಮಗ ಬೆಳಿಗ್ಗೆಯಿಂದ ಏನನ್ನೂ ತಿಂದಿರಲಿಲ್ಲ. ಹೀಗಾಗಿ ನನ್ನ ಪತಿ ಅಂಗಡಿಯವನೊಂದಿಗೆ ಮಾತನಾಡುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದರು. ಅವರ ತಲೆಗೆ ಗುಂಡು ಬಿತ್ತು, ಮೂರರಿಂದ ನಾಲ್ಕು ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ದಾಳಿಯ ಸಮಯದಲ್ಲಿ ಯಾವುದೇ ಸೇನಾ ಸಿಬ್ಬಂದಿ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಮೂವರು ಸ್ಥಳೀಯ ಕಾಶ್ಮೀರಿ ಪುರುಷರು “ಬಿಸ್ಮಿಲ್ಲಾ, ಬಿಸ್ಮಿಲ್ಲಾ” ಎಂದು ಘೋಷಣೆ ಕೂಗುತ್ತಾ ನನ್ನನ್ನು ರಕ್ಷಿಸಿದರು ಎಂದು ಪಲ್ಲವಿ ಹೇಳಿದರು. “ಅವರು ನನ್ನ ಸಹೋದರರಂತೆ” ಎಂದು ಪಲ್ಲವಿ ಹೇಳಿದರು.





