December 15, 2025

ಮಾಣಿ: ಎ.25-l,26,27 ರಂದು ಬಾಲವಿಕಾಸದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟ

0
IMG-20250421-WA0003.jpg

ವಿಟ್ಲ: ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟ 25 ರಿಂದ ಎ. 27 ರ ವರೆಗೆ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟ ಆಯೋಜಿಸುತ್ತಿರುವ ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ತಿಳಿಸಿದರು. ಎ. 21ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧೆಯ ಮಾಹಿತಿ ನೀಡಿದರು.

ಭಾರತೀಯ ಡಾಡ್ಜ್ ಬಾಲ್ ಒಕ್ಕೂಟವು ಕರ್ನಾಟಕ ರಾಜ್ಯ ಡಾಡ್ಜ್ ಬಾಲ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಡಾಡ್ಜ್ ಬಾಲ್ ಸಂಸ್ಥೆ ಮತ್ತು ಮಾಣಿ ಬಾಲ‌ವಿಕಾಸ ವಸತಿ ಶಾಲೆಯ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಿದೆ ಎಂದರು. ಇದೇ ಮೊದಲಬಾರಿಗೆ ರಾಜ್ಯ ,ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಡ್ಜ್ ಬಾಲ್ ಕ್ರೀಡಾಕೂಟ ಆಯೋಜಿಸಲಾಗಿದ್ದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಮಾಣಿಯಲ್ಲಿ ನಡೆಸಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಪುರುಷರು ಮತ್ತು ಮಹಿಳೆಯರ ತಂಡಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೂರು, ರಾಷ್ಟ್ರಮಟ್ಟದ 42 ಮತ್ತು ರಾಜ್ಯಮಟ್ಟದ 38 ತಂಡಗಳ ಸಹಿತ ಎರಡೂವರೆ ಸಾವಿರಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಡಾಡ್ಜ್ ಬಾಲ್ ಕ್ರೀಡೆಗೆ ಸಂಬಂಧಿಸಿದ ಂತೆ ವಿಚಾರ ವಿನಿಮಯ, ಸಂವಾದ, ಗೋಷ್ಠಿಗಳನ್ನೂ ಸಂಘಟಿಸಲಾಗಿದೆ ಎಂದರು.

ವಿಶೇಷ ಆಕರ್ಷಣೆಯಾಗಿ ಆಹಾರೋತ್ಸವ (ಫುಡ್ ಫೆಸ್ಟ್) ಆಯೋಜಿಸಲಾಗಿದೆ. ಕ್ರೀಡಾಕೂಟದ ಯಶಸ್ಸಿಗಾಗಿ ಊರಿನವರನ್ನು ಸೇರಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಉದ್ಘಾಟನೆ:
ಕ್ರೀಡಾಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ದಿವಂಗತ ಉದಯ ಚೌಟ ಹೆಸರಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟವನ್ನು ಎ.26ರಂದು ಶನಿವಾರ ಸಂಜೆ ಆರು ಗಂಟೆಗೆ ಸ್ಪೀಕರ್ ಯು. ಟಿ. ಖಾದರ್ ಉದ್ಘಾಟಿಸಲಿದ್ದಾರೆ.

ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಜೆ. ಪ್ರಹ್ಲಾದ ಶೆಟ್ಟಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,
ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ರಾಜೇಶ್ ನಾಯ್ಕ್, ಅಶೋಕ್ ಕುಮಾರ್ ರೈ, ಸಹಿತ ಜಿಲ್ಲೆಯ ಶಾಸಕರು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾಕೂಟದ ಸಂಯೋಜಕ ಎ.ಎಸ್. ಸಚಿನ್, ಸಂಘಟನಾ ಕಾರ್ಯದರ್ಶಿ ವಿಜೇತ್ ಕುಮಾರ್, ಮಾಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಪ್ರಿಯಾ, ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಜೆ. ಪ್ರಹ್ಲಾದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!