ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೈದ ಉದ್ಯಮಿ
ಗಜಿಯಬಾದ್: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತನ್ನ ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಕುಲದೀಪ್ ತ್ಯಾಗಿ(46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾಧಾ ಕುಂಜ್ ಸೊಸೈಟಿಯಲ್ಲಿರುವ ಮನೆಯಲ್ಲಿ ಕುಲದೀಪ್ ಪರವಾನಗಿ ಪಡೆದಿರುವ ರಿವಾಲ್ವರ್‌ನಿಂದ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುಂಡಿನ ಶಬ್ದ ಕೇಳಿ ಮಕ್ಕಳಿಬ್ಬರು ಕೋಣೆಯತ್ತ ಧಾವಿಸಿದ್ದಾರೆ. ಕುಲದೀಪ್ ಮೃತದೇಹ ನೆಲದ ಮೇಲಿದ್ದರೆ, ಅಂಶು ಮೃತದೇಹ ಹಾಸಿಗೆಯ ಮೇಲೆ ಕಂಡುಬಿದ್ದಿದೆ.
ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಇಬ್ಬರೂ ಅಸುನೀಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ರಿವಾಲ್ವರ್ ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.




