December 15, 2025

ಉರ್ದು ಭಾರತದ ಒಂದು ಭಾಷೆ, ಭಾರತಕ್ಕೆ ಉರ್ದು ಭಾಷೆ ಪರಕೀಯವಲ್ಲ: ಸುಪ್ರೀಂ ಕೋರ್ಟ್

0
105486916.cms_.jpg

ನವದೆಹಲಿ: ಮಹಾರಾಷ್ಟ್ರದ ಅಂಕೋಲಾ ಜಿಲ್ಲೆಯ ಪಾತೂರ್ ಪಟ್ಟಣದ ಮಹಾನಗರ ಪಾಲಿಕೆಯ ಸೂಚನಾ ಫಲಕದಲ್ಲಿನ ಉರ್ದು ಬಳಕೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಉರ್ದು ಭಾಷೆ ಭಾರತಕ್ಕೆ ಪರಕೀಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಭಾರತಕ್ಕೆ ಉರ್ದು ಭಾಷೆ ಪರಕೀಯ ಎಂಬ ತಪ್ಪು ಗ್ರಹಿಕೆಯಿಂದಾಗಿ, ಉರ್ದು ಭಾಷೆಯ ವಿರುದ್ಧ ಪೂರ್ವಗ್ರಹ ಮನೆ ಮಾಡಿದೆ ಎಂದೂ ನ್ಯಾಯಾಲಯ ಹೇಳಿದೆ.

ನ್ಯಾ. ಸುಧಾಂಶು ಧುಲಿಯಾ ಹಾಗೂ ನ್ಯಾ. ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು, ಉರ್ದು ಭಾರತೀಯ ಸಂಜಾತ ಭಾಷೆಯಾಗಿದ್ದು, ಅದೂ ಕೂಡಾ ಮರಾಠಿ ಮತ್ತು ಹಿಂದಿಯಂತೆ ಇಂಡೋ ಆರ್ಯನ್ ಭಾಷೆಯಾಗಿದೆ. “ತಮ್ಮ ಗ್ರಹಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಹಾಗೂ ಪರಸ್ಪರರ ನಡುವೆ ಸಂವಹನ ಏರ್ಪಡಿಸಿಕೊಳ್ಳುವ ಅಗತ್ಯಕ್ಕಾಗಿ ವಿವಿಧ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದ ಜನರು ಉರ್ದು ಭಾಷೆಯನ್ನು ಅಭಿವೃದ್ಧಿಪಡಿಸಿ, ಅದನ್ನು ಭಾರತದಲ್ಲಿ ಬೆಳೆಸಿದರು” ಎಂದು ಹೇಳಿದೆ.

“ನಮ್ಮ ಪರಿಕಲ್ಪನೆಯು ಸ್ಪಷ್ಟವಾಗಿರಬೇಕಿದೆ. ಭಾಷೆ ಒಂದು ಧರ್ಮವಲ್ಲ. ಭಾಷೆ ಯಾವುದೇ ಧರ್ಮವನ್ನು ಪ್ರತಿನಿಧಿಸುವುದೂ ಇಲ್ಲ. ಭಾಷೆಯು ಒಂದು ಸಮುದಾಯ, ಒಂದು ಪ್ರಾಂತ್ಯ ಹಾಗೂ ಜನರಿಗೆ ಸೇರಿದ್ದಾಗಿದೆಯೇ ಹೊರತು ಧರ್ಮಕ್ಕಲ್ಲ. ಭಾಷೆಯು ವಿಭಿನ್ನ ದೃಷ್ಟಿಕೋನಗಳು ಹಾಗೂ ಶ್ರದ್ಧೆಗಳನ್ನು ಹೊಂದಿರುವ ಜನರನ್ನು ಪರಸ್ಪರರ ಗ್ರಹಿಕೆಯ ವಿನಿಮಯದ ಮೂಲಕ ಸನಿಹಕ್ಕೆ ತರುವ ಒಂದು ಮಾಧ್ಯಮವಾಗಿದೆ. ಹೀಗಾಗಿ ಭಾಷೆಯೊಂದು ಅವರ ವಿಭಜನೆಗೆ ಕಾರಣವಾಗಬಾರದು” ಎಂದು ನ್ಯಾಯಾಲಯ ತಾಕೀತು ಮಾಡಿದೆ.

ನಂತರ, ಪಾತೂರ್ ಮಹಾನಗರ ಪಾಲಿಕೆಯ ನೂತನ ಕಟ್ಟಡದ ಸೂಚನಾ ಫಲಕದಲ್ಲಿ ಉರ್ದು ಬಳಸಿರುವುದನ್ನು ಪ್ರಶ್ನಿಸಿ ಮಾಜಿ ಕೌನ್ಸಿಲರ್ ವರ್ಷತಾಯಿ ಸಂಜಯ್ ಬಗಾಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

Leave a Reply

Your email address will not be published. Required fields are marked *

You may have missed

error: Content is protected !!