ನ್ಯಾಯಾಲಯದೊಳಗೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಸಿಬ್ಬಂದಿ

ಉಡುಪಿ: ಅಕ್ರಮ ಮರಳು ಸಾಗಾಟದ ವೇಳೆ ಪೊಲೀಸರಿಂದ ಸೀಜ್ ಆಗಿದ್ದ ವಾಹನವನ್ನು ಬಿಡುಗಡೆ ಮಾಡಲು ಸಂಬಂಧಿಸಿದ ಕೆಲಸಗಳಿಗೆ ಲಂಚ ಕೇಳಿದ್ದ ಉಡುಪಿ ನ್ಯಾಯಾಲಯದ ಸಹಾಯಕ ಅಭಿಯೋಜಕರಾದ ಗಣಪತಿ ನಾಯ್ಕ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪಿರ್ಯಾದಿದಾರರರು ಪರಿಚಯದ ವ್ಯಕ್ತಿಯೊಬ್ಬರ ವಾಹನದಲ್ಲಿ ಮೂಲ್ಕಿಯಿಂದ ಉಡುಪಿಗೆ ಮರಳು ಸಾಗಿಸುತ್ತಿರುವಾಗ ನಿಟ್ಟೂರು ಬಳಿಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಅಧಿಕಾರಿಯವರು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಾಗಿತ್ತು,
ವಾಹನದ ಬಿಡುಗಡೆಯ ಮುಂದಿನ ಕ್ರಮಗಳಿಗಾಗಿ ಜಿ.ಪಿ.ಎ ಹೊಂದಿದ ಪಿರ್ಯಾದಿದಾರರು ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಮತ್ತು ಜೆ.ಎಂ.ಎಫ್ ಸಿ ಉಡುಪಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ.
ಈ ವಾಹನದ ಬಿಡುಗಡೆಯ ಬಗ್ಗೆ ಮುಂದಿನ ಕ್ರಮಗಳಿಗಾಗಿ ಆಕ್ಷೇಪಣೆ ಸಲ್ಲಿಸಲು ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಮತ್ತು ಜೆ.ಎಂ.ಎಫ್ ಸಿ ಉಡುಪಿ ನ್ಯಾಯಾಲಯದ ಸಹಾಯಕ ಅಭಿಯೋಜಕರಾದ ಗಣಪತಿ ನಾಯ್ಕ್ ಇವರು ದೂರದಾರರ ಬಳಿ ರೂ 2000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.