ಮಂಗಳೂರು: ಢಿಕ್ಕಿ ಹೊಡೆಸಿ ಬೈಕ್ ಚಾಲಕನ ಕೊಲೆಗೆ ಯತ್ನ: ಆರೋಪಿ ಸತೀಶ್ ಕುಮಾರ್ ಬಂಧನ

ಮಂಗಳೂರು: ಬಿಜೈ ಕಾಪಿಕಾಡ್‌ನ 6ನೇ ಕ್ರಾಸ್‌ನಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆಸಿ ಬೈಕ್ ಚಾಲಕನನ್ನು ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಸತೀಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಅಮಾಯಕ ಪಾದಚಾರಿ ಮಹಿಳೆ ಯಲ್ಲವ್ವ ಉಪ್ಪಾಳ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರಣ ಗೋಡೆಯಲ್ಲಿ ಸಿಲುಕಿ ನೇತಾಡಿದ ಪರಿಣಾಮ ಅವರ ಕಾಲಿಗೆ ತೀವ್ರ ತರಹದ ಗಾಯ ಉಂಟಾಗಿದೆ.
ಗುರುವಾರ ಬೆಳಗ್ಗೆ 8.30ರ ವೇಳೆಗೆ ಮಹಿಳೆ ನಿತ್ಯ ತೆರಳುತ್ತಿದ್ದ ಮನೆಗೆ ಕೆಲಸಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಯಾರದ್ದೋ ಜಗಳ ಮಹಿಳೆಗೆ ಪ್ರಾಣಕ್ಕೆ ಸಂಚಕಾರ ತಂದಿದೆ. ಕಾರು ಚಾಲಕನಿಂದ ಢಿಕ್ಕಿ ಹೊಡೆಸಲ್ಪಟ್ಟ ಬೈಕ್ ಸವಾರ ಮುರಳಿ ಪ್ರಸಾದ್ ಅವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.