ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹ
ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ. ನಮ್ಮ ಸಮುದಾಯದ ಹೆಣ್ಣುಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಕೊಡವ ಸಂಘಟನೆಯಿಂದ ಪತ್ರ ಬರೆಯಲಾಗಿದೆ.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರು, ನಮ್ಮ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ನಮ್ಮ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದವರು. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ಅವರಿಂದು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ನಟಿಯ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನ ತಿಳಿಯದ ಕೆಲವರು ವಿನಾಕಾರಣ ಟೀಕೆ ಮಾಡುವ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇದು ಘೋರ ಮಾತ್ರವಲ್ಲದೆ ಬೆದರಿಕೆಗೆ ಸಮ ಎಂದು ಪತ್ರದಲ್ಲಿ ದೂರಿದ್ದಾರೆ.




