ಉಡುಪಿ: ಮೊಬೈಲ್ ನೋಡಬೇಡ ಎಂದ ಪೋಷಕರು: ಕೋಪಗೊಂಡ ಮಗಳು ಆತ್ಮಹತ್ಯೆ
ಉಡುಪಿ: ಮೊಬೈಲ್ ನೋಡುತ್ತಿದ್ದ ಮಗಳಿಗೆ ಮೊಬೈಲ್ ನೋಡಬೇಡ ಅಂತ ಬುದ್ದಿ ಹೇಳಿದ್ದಕ್ಕೆ ಕೋಪಗೊಂಡ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಉಡುಪಿಯ ಬ್ರಹ್ಮಾವರದ ಸಾಸ್ತಾನದಲ್ಲಿ ನಡೆದಿದೆ.
ಸಾಸ್ತಾನದ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಪುತ್ರಿ ದಿಶಾ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಹದಿನಾರು ವರ್ಷದ ದಿಶಾಳಿಗೆ ತಾಯಿ ಮೊಬೈಲ್ ನೋಡದಂತೆ ತಾಕೀತು ಮಾಡಿದಕ್ಕೆ ಸಿಟ್ಟಿಗೆದ್ದಿದ್ದಾಳೆ.
ತಕ್ಷಣವೇ ಕೋಣೆ ಸೇರಿಕೊಂಡು ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ತಾಯಿ ಬಾಗಿಲು ತೆರೆಯುವಂತೆ ಹೇಳಿದ್ರೂ ತೆಗೆಯದೇ ಇದ್ದಾಗ ಕಿಟಿಕಿಯಿಂದ ಇಣುಕಿ ನೋಡಿದ್ದಾರೆ.
ಈ ವೇಳೆ ಕಿಟಕಿಯ ಕಂಬಿಗೆ ಹಗ್ಗ ಬಿಗಿದು ಆತ್ಮಹತ್ಯೆಗೆ ಯತ್ನಿಸಿರುವುದು ಕಾಣಿಸಿದೆ. ತಕ್ಷಣವೇ ಅಕ್ಕಪಕ್ಕದ ಮನೆಯವರು ಬಂದು ಬಾಗಿಲು ಒಡೆದು ದಿಶಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ದಾರಿ ಮಧ್ಯೆ ಆಕೆ ಕೊನೆಯುಸಿರೆಳೆದಿದ್ದಾಳೆ. ಈಕೆ ಕೋಟಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




