ಶಿವಾಜಿ ಪ್ರತಿಮೆಗೆ ಕಪ್ಪು ಮಸಿ ಬಳಿದ ಪ್ರಕರಣ:
ಏಳು ಮಂದಿ ಆರೋಪಿಗಳ ಬಂಧನ
ಬೆಂಗಳೂರು: ಇಲ್ಲಿನ ಸದಾಶಿವನಗರ ಬಳಿ ಬಾಷ್ಯಂ ಸರ್ಕಲ್ ಹತ್ತಿರದ ಸ್ಯಾಂಕಿ ಕೆರೆಯ ಮರಾಠ ದೊರೆ ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಕಪ್ಪು ಮಸಿ ಬಳಿದು ವಿರೂಪಗೊಳಿಸಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶುಕ್ರವಾರ ಮರಾಠ ಅಸೋಸಿಯೇಷನ್ ನೀಡಿದ್ದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸರು ಶೋಧ ಆರಂಭಿಸಿ, ಪ್ರಮುಖ ಆರೋಪಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಬೇಡಿಕೆಯಿಂದ ಆಕ್ರೋಶಿತರಾದ ದುಷ್ಕರ್ಮಿಗಳು ಅಸಮಾಧಾನಗೊಂದು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕಿರುವ ಆರೋಪ ಮತ್ತು ಒಳಸಂಚು ಆರೋಪ ಹೊರಿಸಲಾಗಿದೆ.
ಶಿವಾಜಿ ಮಹಾರಾಜರ ಪ್ರತಿಮೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸ ಮಾಡಿದ ನಂತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಗಾವಿಯಲ್ಲೂ ಪ್ರತಿಭಟನೆಗಳು ಮುಂದುವರಿದಿದ್ದು, ಭಾರಿ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ವಿರುದ್ಧ ಕನ್ನಡಿಗರ, ಕನ್ನಡ ಪರ ಹೋರಾಟಗಾರರು ಭಾರೀ ಹೋರಾಟಕ್ಕೆ ಮುಂದಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಹಿತಕರ ಘಟನೆಗಳನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಠಿಣ ಆದೇಶಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ “ಕನ್ನಡಿಗರ ದೌರ್ಜನ್ಯ” ಮತ್ತು “ವಿಕೃತ ಮನಸ್ಥಿತಿ” ಎಂದು ಆರೋಪಿಸಿ ದೌರ್ಜನ್ಯ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ.





