ಈಶಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸ್ವಂತ ನಿರ್ಧಾರ, ಹೈಕಮಾಂಡ್, ದೊಡ್ಡ ಲೀಡರ್‌ಗಳ ಮಾತಿಗೆ ಉತ್ತರ ಕೊಡಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಈಶಾ ಯೋಗಕೇಂದ್ರದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸ್ವಂತ ನಿರ್ಧಾರ. ಹೈಕಮಾಂಡ್, ದೊಡ್ಡ ಲೀಡರ್‌ಗಳ ಮಾತಿಗೆ ಉತ್ತರ ಕೊಡಲು ಹೋಗುವುದಿಲ್ಲ. ಸಾವಿರ ಜನ ವಿರೋಧ ಮಾಡಲಿ, ನನ್ನ ನಂಬಿಕೆ ನನಗೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಗುರುವಾರ ಮಾತನಡಿದ ಅವರು, ‘ಸದ್ಗುರು ಜಗ್ಗಿ ವಾಸುದೇವ್ ಮೈಸೂರಿನವರು, ಕಾವೇರಿ ಹೋರಾಟದಲ್ಲೂ ಭಾಗವಹಿಸಿದ್ದರು. ಅವರು ರಾಹುಲ್ ಗಾಂಧಿ ಬಗ್ಗೆ ಟೀಕಿಸಿದ್ದ ಮಾಹಿತಿ ಇಲ್ಲ. ಈ ಕುರಿತು ನನ್ನ ನಡೆಯ ವಿರುದ್ಧ ಟ್ವೀಟ್ ಮಾಡಿದ್ದ ‘ರಾಷ್ಟ್ರ ನಾಯಕರ’ ಮಾತಿಗೆ ಮನ್ನಣೆ ಕೊಡುವುದಿಲ್ಲ’ ಎಂದು ಪರೋಕ್ಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಅವರ ಹೆಸರು ಹೇಳದೆ ಟೀಕಿಸಿದರು.
‘ಧರ್ಮ, ಆಚರಣೆ ಅವರವರ ನಂಬಿಕೆ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಇತರೆ ಧರ್ಮಗಳ ಬಗ್ಗೆಯೂ ಗೌರವವಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೂ ಪರಮ ಶಿವಭಕ್ತ. ಚಿತ್ರದುರ್ಗದ ಮುರುಘಾ ಮಠದಲ್ಲಿ ದೀಕ್ಷೆ ಪಡೆದಿದ್ದರು. ಸಾವಿರ ಜನರು ವಿರೋಧಿಸಿದರೂ, ನನ್ನ ನಂಬಿಕೆ ನನ್ನದು. ಕಾಂಗ್ರೆಸ್ ಟೀಕೆ, ಬಿಜೆಪಿ ಸ್ವಾಗತಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮದು ಜಾತಿ ರಾಜಕಾರಣ ಅಲ್ಲ, ನೀತಿ ರಾಜಕಾರಣ’ ಎಂದರು.





