ಉಪ್ಪಿನಂಗಡಿ: ಚಲಿಸುತ್ತಿದ್ದ ಲಾರಿಯಿಂದ ಜಿಗಿದು ನಿರ್ವಾಹಕ ಮೃತ್ಯು: ಬೀಡಿ ಸೇದಲು ನಿಲ್ಲಿಸಲಿಲ್ಲ ಎಂದು ಲಾರಿಯಿಂದ ಜಿಗಿದ ನಿರ್ವಾಹಕ

ಉಪ್ಪಿನಂಗಡಿ: ಬೀಡಿ ಸೇದಲು ನಿಲ್ಲಿಸಲಿಲ್ಲ ಎಂದು ಚಲಿಸುತ್ತಿದ್ದ ಲಾರಿಯಿಂದ ಜಿಗಿದ ಪರಿಣಾಮ ಕಾಂಕ್ರೀಟ್ ರಸ್ತೆಗೆ ಬಿದ್ದು ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಫೆ. 25ರಂದು ಮುಂಜಾನೆ ನಡೆದಿದೆ.
ಮೃತಪಟ್ಟ ಲಾರಿ ನಿರ್ವಾಹಕ ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ಎರುವೈಕಾಡು ಗ್ರಾಮದ ನಿವಾಸಿ ಲಕ್ಷ್ಮಣ್ ಸೇಗೊಂಟ್ಟವನ್(43) ಎಂಬ ವ್ಯಕ್ತಿ.
ಈತ ತನ್ನೂರಿನವರೇ ಆದ ವೇಳಾಯುದಂ ರಾಜಾಗಂ ಎಂಬವರ ಜೊತೆ ಲಾರಿಯಲ್ಲಿ ಕ್ಲೀನರ್ ಆಗಿ 1 ವಾರದಿಂದ ಕೆಲಸ ಮಾಡಿಕೊಂಡಿದ್ದರು. ಇವರು ತಮಿಳುನಾಡಿನ ದಿಂಡಿವನಮ್ ಎಂಬಲ್ಲಿಂದ ಕಲ್ಲಂಗಡಿ ಹಣ್ಣುಗಳನ್ನು ಲೋಡ್ ಮಾಡಿ ಕೊಂಡು ಮಂಗಳೂರಿಗೆ ಬರುತ್ತಿದ್ದು, ಫೆ.25ರಂದು ಮಧ್ಯರಾತ್ರಿ ಕಂಡಕ್ಟರ್ ಲಕ್ಷ್ಮಣ್ ಸೇಗೊಂಟ್ಟವನ್ ಬೀಡಿ ಸೇದಬೇಕೆಂದು ಹೇಳಿದಾಗ ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ಲಾರಿ ನಿಲ್ಲಿಸುತ್ತೇನೆಂದು ಚಾಲಕ ವೇಳಾಯುದಂ ಹೇಳಿದ್ದರು ಎನ್ನಲಾಗಿದೆ. ಇದರಿಂದ ಉದ್ವೇಗಗೊಂಡ ಲಕ್ಷ್ಮಣ್ ಸೇಗೊಂಟ್ಟವನ್ ಲಾರಿ ಅಡ್ಡಹೊಳೆ ಸೇತುವೆ ಬಳಿ ತಲುಪಿದಾಗ ಲಾರಿಯ ಎಡಬದಿ ಕಿಟಕಿಯ ಮೂಲಕ ಕಾಂಕ್ರೀಟ್ ರಸ್ತೆಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ.
ಬಳಿಕ ವೇಳಾಯುದಂ ಅವರು ಲಾರಿಯನ್ನು ನಿಲ್ಲಿಸಿ ಇಳಿದು ನೋಡಿದಾಗ ಲಕ್ಷ್ಮಣ್ ಸೇಗೊಂಟ್ಟವನ್‍ನ ಎದೆಯ ಭಾಗದಲ್ಲಿ ತರಚಿದ ಗಾಯವುಂಟಾಗಿ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ವೇಳಾಯುದಂ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.