ರಚಿನ್ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ 5 ವಿಕೆಟ್‌ಗಳ ಜಯ: ಟೂರ್ನಿಯಿಂದ ಬಾಂಗ್ಲಾದೇಶ, ಪಾಕಿಸ್ತಾನ ಔಟ್

ರಾವಲ್ಪಿಂಡಿ: ರಚಿನ್ ರವೀಂದ್ರ ಅವರ ಆಕರ್ಷಕ ಶತಕದ ನೆರವಿನಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್‌ಗಳ ಜಯ ಸಾಧಿಸಿದೆ.
ನ್ಯೂಜಿಲೆಂಡ್ ಜಯದೊಂದಿಗೆ ಟೂರ್ನಿಯಿಂದಲೇ ಬಾಂಗ್ಲಾದೇಶ ಮತ್ತು ಅತಿಥೇಯ ಪಾಕಿಸ್ತಾನ ನಿರ್ಗಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 236 ರನ್ ಗಳಿಸಿತು. ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 46.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 240 ರನ್ ಹೊಡೆದು ಸೆಮಿಫೈನಲ್ ಪ್ರವೇಶಿಸಿತು.
ಇಂದಿನ ಪಂದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿತ್ತು. ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಜಯಗಳಿಸಿ ಬಾಂಗ್ಲಾ ವಿರುದ್ಧ ಪಾಕ್ ಗೆದ್ದಿದ್ದರೆ ರನ್ ರೇಟ್ ಆಧಾರದಲ್ಲಿ ತಂಡಗಳು ಸೆಮಿಫೈನಲ್ ಪ್ರವೇಶಿಸಬೇಕಿತ್ತು. ಆದರೆ ಈಗ ಬಾಂಗ್ಲಾ ಸೋಲುವ ಮೂಲಕ ನ್ಯೂಜಿಲೆಂಡ್ ಮತ್ತು ಭಾರತ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿವೆ.