ಭಾರತದ ಅಥ್ಲೀಟ್, ಚಿನ್ನದ ಪದಕ ವಿಜೇತೆ ಪಿಟಿ ಉಷಾ ವಿರುದ್ಧ ಪ್ರಕರಣ ದಾಖಲು
ಕೋಝಿಕ್ಕೋಡ್: ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಫ್ ನೀಡಿದ ದೂರಿನ ಆಧಾರದ ಮೇಲೆ ಕೇರಳದ ಕೋಝಿಕ್ಕೋಡ್ ಪೊಲೀಸರು ಭಾರತದ ‘ಚಿನ್ನದ ಹುಡುಗಿ’ ಪಿಟಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಐಪಿಸಿ 420 (ವಂಚನೆ ಮತ್ತು ಅಪ್ರಾಮಾಣಿಕತೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉಷಾ ಸೇರಿ ಆರು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆ ನಿರ್ಮಾಣಕ್ಕೆ ಇಂತಿಷ್ಟು ಹಣ ನೀಡಿದ್ದರೂ, ಆದರೆ ಗ್ಯಾರಂಟಿ ಗಡುವಿನೊಳಗೆ ಮನೆ ಪೂರ್ಣಗೊಳಿಸಿಲ್ಲ ಎಂದು ಜೆಮ್ಮಾ ಜೋಸೆಫ್ ದೂರಿದ್ದಾರೆ.
ಜೆಮ್ಮಾ ಜೋಸೆಫ್ ಕೋಝಿಕ್ಕೋಡ್‌ನಲ್ಲಿ ಬಿಲ್ಡರ್‌ನಿಂದ 1,012 ಚದರ ಅಡಿ ಫ್ಲಾಟ್ ಖರೀದಿಸಿದರು. ಜೋಸೆಫ್ ಒಟ್ಟು ರೂ. 46 ಲಕ್ಷ ಪಾವತಿಸಿದ್ದಾರೆ. ಆದರೆ, ಗಡುವು ಮುಗಿದಿದ್ದರು ಬಿಲ್ಡರ್ ಜೋಸೆಫ್ ಗೆ ಫ್ಲಾಟ್ ಹಸ್ತಾಂತರಿಸಿರಲಿಲ್ಲ. ಆದರೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮೂಲಕ ಉಷಾ ಬಿಲ್ಡರ್‌ಗೆ ಆ ಎಲ್ಲ ಹಣವನ್ನು ಪಾವತಿಸಿದ್ದಾರೆ. ಆದರೆ ಫ್ಲಾಟ್ ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಜೋಸೆಫ್ ದೂರಿದ್ದಾರೆ. ಉಷಾ ಬಿಲ್ಡರ್ ಜೊತೆ ಸೇರಿ ತನಗೆ ಮೋಸ ಮಾಡಿದ್ದಾರೆ ಎಂದು ಜೋಸೆಫ್ ಆರೋಪಿಸಿದ್ದಾರೆ. ಅವರ ದೂರನ್ನು ಕೋಝಿಕ್ಕೋಡ್ ಪೊಲೀಸ್ ಮುಖ್ಯಸ್ಥ ಎವಿ ಜಾರ್ಜ್ ಅವರಿಗೆ ವಿವರವಾದ ವಿಚಾರಣೆಗಾಗಿ ಕಳುಹಿಸಲಾಗಿದೆ.
ದೂರುದಾರರು ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮೊರೆ ಹೋಗಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಆದರೆ, ಬಿಲ್ಡರ್ ಆಗಲಿ, ಪಿಟಿ ಉಷಾ ಆಗಲಿ ಹಣ ಮರುಪಾವತಿ ಮಾಡಲು ಒಪ್ಪಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೀಗಾಗಿ, ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಐಪಿಸಿ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಲ್ಡರ್ ಗಳ ಮೇಲೆ ನಿಗಾ ಇಡುವ ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





