ಮೂಡಬಿದಿರೆ: ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು: ಮನೆಮಂದಿಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ಕಳ್ಳತನ
ಮೂಡುಬಿದಿರೆ: ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಯುವತಿಯನ್ನು ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಫೆಬ್ರವರಿ 16 ರಂದು ಅಳಿಯೂರಿನಲ್ಲಿ ನಡೆದಿದೆ.
ಅಳಿಯೂರಿನ ನೇಲಡೆಯ ನಿವಾಸಿ ಖ್ಯಾತ ಅಡುಗೆ ಕೆಲಸ ಮಾಡುವ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳರು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಶಾಂತ್ ಜೈನ್ ಅವರು ಅಡುಗೆ ಕೆಲಸಕ್ಕೆ ತೆರಳಿದ್ದರು, ಪತ್ನಿ ಕೂಡ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ಸಂದಭ೯ ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ.ಇದೇ ಸಮಯವನ್ನು ಅರಿತ ಕಳ್ಳರು ಆ ಮನೆಯೊಳಗೆ ನುಗ್ಗಿದ್ದಾರೆ. ಕಪಾಟು ತೆರೆಯುವ ಸದ್ದು ಕೇಳಿ ಯುವತಿ ಬಂದು ನೋಡಿದಾಗ ಬೊಬ್ಬೆ ಹೊಡೆಯದಂತೆ ಬಾಯಿಗೆ ಒತ್ತಿ ಹಿಡಿದರೆನ್ನಲಾಗಿದೆ.
ಅಲ್ಲದೆ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ. ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನ 12.30 ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾರೆಳೆನ್ನಲಾಗಿದೆ.
ಮನೆಯೊಳಗಡೆ ನುಗ್ಗಿರುವ ಇಬ್ಬರು ಮುಸುಕುಧಾರಿಗಳು ಎಂದು ತಿಳಿದುಬಂದಿದ್ದು, ಸ್ಥಳೀಯ ಹಾಗೂ ಈ ಮನೆಯನ್ನು ಬಲ್ಲವರೇ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




