ಪಡುಬಿದ್ರಿ: ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳವು ಆರೋಪಿಗಳ ಬಂಧನ

ಪಡುಬಿದ್ರಿ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಪಡುಬಿದ್ರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಮುಹಮ್ಮದ್ ರುಹಾನ(28), ಹಾಗೂ ಶಿವಮೊಗ್ಗ ಅಶೋಕ್ ನಗರದ ತಾಜುದ್ದೀನ್ ಪಿ.ಕೆ. ಯಾನೆ ತಾಜು (28) ಎಂದು ಗುರುತಿಸಲಾಗಿದೆ.
ಪಡುಬಿದ್ರೆ ಠಾಣೆಯಲ್ಲಿ ದಾಖಲಾಗದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಇವರ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಮುಹಮ್ಮದ್ ರುಹಾನ್ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರಕರಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ತಾಜುದ್ದೀನ್ ವಿರುದ್ಧ ಶಿವಮೊಗ್ಗೆ ಜಿಲ್ಲೆಯಲ್ಲಿ 8, ಹುಬ್ಬಳ್ಳಿ ಧಾರವಾಡ ನಗರದಲ್ಲಿ 5, ಹಾಸನ ಜಿಲ್ಲೆಯಲ್ಲಿ 2, ಹಾವೇರಿ ಜಿಲ್ಲೆಯಲ್ಲಿ 1 ಮತ್ತು ಬೆಂಗಳೂರು ನಗರದಲ್ಲಿ 1 ಸೇರಿದಂತೆ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ