ಕಾರು ಚಾಲನೆ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಬಿತ್ತು ದಂಡ

ಬೆಂಗಳೂರು: ಕಾರು ಚಾಲನೆ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಆರ್‌ಟಿ ನಗರ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.
ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಕಾರು ಚಾಲನೆ ಮಾಡುವಾಗ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಹಿಳಾ ಚಾಲನೆ ಮಾಡುತ್ತಿದ್ದ ಕಾರಿನ ನಂಬರ್ ಪ್ಲೇಟ್ ವಿಡಿಯೋದಲ್ಲಿ ಪತ್ತೆಯಾಗಿದ್ದು, ಇದನ್ನು ಪರಿಶೀಲಿಸಿ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಮಹಿಳೆಗೆ 1,000 ರೂ. ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಉತ್ತರ ವಿಭಾಗದ ಡಿಸಿಪಿ (ಸಂಚಾರ)ಮನೆಯಿಂದಲೇ ಕೆಲಸ ಮಾಡಿ, ಚಾಲನೆ ವೇಳೆ ನಿಮ್ಮ ಕಾರಿನಿಂದಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮಹಿಳೆಯ ವಿಡಿಯೋ ಹಾಗೂ ದಂಡದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.