ಮರಳು ತುಂಬಿದ್ದ ಲಾರಿ ಪಲ್ಟಿ: ರಸ್ತೆಬದಿ ಕೆಲಸ ಮಾಡುತ್ತಿದ್ದ ಮಗು ಸಹಿತ ಮೂವರು ಮಹಿಳೆಯರು ಸಾವು
ಗಾಂಧಿನಗರ: ಮರಳು ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ರಸ್ತೆಬದಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಹಾಗೂ ಒಂದು ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುಜರಾತ್‌ನ ಬನಸ್ಕಂತ ಜಿಲ್ಲೆಯ ಥರಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಿರಿದಾದ ತಿರುವಿನಲ್ಲಿ ಲಾರಿ ಚಾಲಕ ವಾಹನ ಚಲಾಯಿಸಲು ಪ್ರಯತ್ನಿಸಿದ ವೇಳೆ ಲಾರಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಜೆಸಿಬಿ ಬಳಸಿ ಮೃತರ ಶವಗಳನ್ನು ಹೊರತೆಗೆಯಲಾಗಿದೆ. ಮೃತರು ದಾಹೋದ್ ಜಿಲ್ಲೆಯವರಾಗಿದ್ದು, ಕೆಲಸಕ್ಕಾಗಿ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.




