November 28, 2026

ಉಪ್ಪಿನಂಗಡಿ ಟೋಲ್ ದುಬಾರಿ ಶುಲ್ಕ ವಿರೋಧಿಸಿ ಪ್ರತಿಭಟನೆ

47ce79c9-7dc4-4cc1-b517-9b04b2ad1355

ಉಪ್ಪಿನಂಗಡಿ: ದುಬಾರಿ ಶುಲ್ಕದಿಂದ ವಿವಾದಕ್ಕೊಳಗಾಗುತ್ತಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ವಳಾಲು ಪಡ್ಪು ಬಳಿಯ ಟೋಲ್ ನಲ್ಲಿ ಶುಕ್ರವಾರ ರೈತಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಮತ್ತು ಕಾರ್ಮಿಕ ಮುಖಂಡ ಬಿ.ಎಂ.ಭಟ್ ನೇತೃತ್ವದಲ್ಲಿ ಟೋಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಳಾಲು ಪಡ್ಪು ಟೋಲ್ ನಲ್ಲಿ ಆರಂಭಗೊಂಡಿರುವ ಶುಲ್ಕ ಸಂಗ್ರಹವನ್ನು ತಕ್ಷಣ ಸ್ಥಗಿತಗೊಳಿಸಬೇಕು. ಜಿಲ್ಲಾಧಿಕಾರಿ, ಹೈವೇ ಅಥಾರಿಟಿ ಮತ್ತು ಸ್ಥಳೀಯ ಜನರ ನಡುವೆ ಮಾತುಕತೆ ನಡೆಸಿದ ಬಳಿಕ ಟೋಲ್ ಸಂಗ್ರಹ ಆರಂಭಿಸಬೇಕು. ಬಜತ್ತೂರು ಗ್ರಾಮವೂ ಸೇರಿದಂತೆ ನಿರಂತರವಾಗಿ ಸಂಚಾರದ ಅಗತ್ಯವಿರುವ ಸ್ಥಳೀಯರಿಗೆ ಟೋಲ್ ಫ್ರೀ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಈ ಬಗ್ಗೆ ಮಾತುಕತೆಗೆ ಒಂದು ವಾರದ ಗಡು ನೀಡಿದರು. ಸ್ಪಂದಿಸದಿದ್ದರೆ 3 ಸಾವಿರಕ್ಕೂ ಅಧಿಕ ಮಂದಿಯನ್ನು ಸೇರಿಸಿ ಟೋಲ್ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಂದಿಗೆ ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಅವರು ಮಾತನಾಡಿ, ತರಾಟೆಗೆ ತೆಗೆದುಕೊಂಡರು.

“ನಿಮ್ಮ ಟೋಲೇ ದೊಡ್ಡ ಸಮಸ್ಯೆ, ನಾವು ಸಮಸ್ಯೆ ಮಾಡುತ್ತಿಲ್ಲ, ನಮ್ಮ ಹಕ್ಕು ಕೇಳುತ್ತಿದ್ದೇವೆ. ಇಲ್ಲೊಂದು ಸರ್ವೀಸ್ ರಸ್ತೆ ಇದೆಯಾ ? ಮಸೀದಿ, ದೇವಸ್ಥಾನ, ಬ್ಯಾಂಕ್ ಗೆ ಹೋಗುವವರು ನಿಮಗೆ ದುಡ್ಡುಕೊಟ್ಟು ಹೋಗಬೇಕಾ ? ಹಾಲಿನ ಸೊಸೈಟಿಗೆ 10 ಲೀಟರ್ ಹಾಲು ತೆಗೆದುಕೊಂಡು ಹೋಗುವವರು ನಿಮಗೆ 200 ರೂ. ಕೊಟ್ಟು ಹೋಗಬೇಕಾ ? ನೀವೇನು ಮಕ್ಕಳಾಟಿಕೆ ಮಾಡುತ್ತಿದ್ದೀರಾ ? ಜನತೆಯ ಕಷ್ಟ ನಿಮಗೇನು ಗೊತ್ತಿದೆ ಎಂದು ಅವರು ಪ್ರಶ್ನಿಸಿದರು.

ಕಾರ್ಮಿಕ ಮುಖಂಡ ಬಿ.ಎಂ.ಭಟ್ ಅವರು ಮಾತನಾಡಿ, ನಿಯಮಬಾಹಿರವಾಗಿ ಈ ಟೋಲ್ ಆರಂಭಿಸಲಾಗಿದೆ. ಕಿಲೋಮೀಟರ್ ಅಂತರ ನಿಯಮ ಪಾಲಿಸದೆ ಪ್ರಾರಂಭಿಸಿದ ಈ ಟೋಲ್ ನಲ್ಲಿ ದುಬಾರಿ ಹಣ ಲೂಟಿ ಹೊಡೆಯುತ್ತಿ ದ್ದಾರೆ. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಶುಲ್ಕ ಸಂಗ್ರಹ ಆರಂಭಿಸಿದ್ದಾರೆ. ಇದು ಕೇಂದ್ರ ಸರಕಾರದ ಸರ್ವಾಧಿಕಾರಿ ಆಡಳಿತದ ಪರಮಾವಧಿ ಕೆಲಸವಾಗಿದೆ. ಎಲ್ಲಾ ಟೋಲ್ ಗಳಲ್ಲಿ ಸ್ಥಳಿಯರಿಗೆ ಉಚಿತ ವ್ಯವಸ್ಥೆ ನೀಡಲಾಗುತ್ತಿದೆ. ಆದರೆ ಇಲ್ಲಿ ಕಾರು ಏಕಮುಖ ಪ್ರವೇಶಕ್ಕೆ 140, ಲಾರಿಗಳಿಗೆ 465 ವಸೂಲಿ ಮಾಡುವ ಮೂಲಕ ಜನತೆಯ ಹಣವನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಸ್ಥಳೀಯ ಜನತೆಯೊಂದಿಗೆ ಮಾತುಕತೆ ನಡೆಸಿ ಆ ಬಳಿಕ ಟೋಲ್ ಸಂಗ್ರಹ ಮಾಡಿ. ಇಲ್ಲವಾದರೆ ಪ್ರತಿಭಟನೆ ಉಗ್ರರೂಪ ತಳೆಯಲಿದೆ ಎಂದು ಎಚ್ಚರಿಕೆ ನೀಡಿದ ಅವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡಬಾರದು ಎಂದರು.

error: Content is protected !!