ವಿಟ್ಲ ಪಡ್ನೂರು ಎಸ್‌ಡಿಪಿಐ ಪ್ರತಿಭಟನಾ ಸಭೆ: ರಸ್ತೆ ಡಾಮರೀಕರಣಕ್ಕೆ ಆಗ್ರಹ
ವಿಟ್ಲ: ರಸ್ತೆ ಡಾಮರೀಕರಣ ಹಾಗೂ ರಸ್ತೆ ಬದಿಯ ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಎಸ್‌ಡಿಪಿಐ ವಿಟ್ಲ ಪಡ್ನೂರು ವತಿಯಿಂದ ಶುಕ್ರವಾರ ಕಡಂಬು ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ ಅಝೀಝ್ ಕಡಂಬು, “ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವವರಾಗಿರಬೇಕು. ಚುನಾವಣೆಯಲ್ಲಿ ಗೆದ್ದ ಬಳಿಕ ಕಾಣೆಯಾಗಬಾರದು. ಜನರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಡುವ ಪಕ್ಷವಿದ್ದರೆ ಅದು ಎಸ್‌ಡಿಪಿಐ ಮಾತ್ರ. ಹೋರಾಟವೇ ನಮ್ಮ ಜೀವನಾಡಿಯಾಗಿದ್ದು, ಈ ವಿಚಾರದಲ್ಲಿ ಒಂದು ಇಂಚೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್‌ಡಿಪಿಐ ವಿಟ್ಲ ಪಡ್ನೂರು ಗ್ರಾಮ ಸಮಿತಿ ಸದಸ್ಯ ಮಹಮ್ಮದ್ ಕಡಂಬು ಮಾತನಾಡಿ, ಇಲ್ಲಿನ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಬರುವ ಸೋಮವಾರ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ರಸ್ತೆಯ ಪೂರ್ಣ ಪ್ರಮಾಣದ ಡಾಮರೀಕರಣ ಹಾಗೂ ರಸ್ತೆ ಬದಿಯ ಚರಂಡಿ ನಿರ್ಮಾಣದ ಕುರಿತು ಸ್ಪಷ್ಟ ಭರವಸೆ ನೀಡುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಸೋಮವಾರ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ, ವಿಟ್ಲದಿಂದ ಕುಳ್ನಾಡು ವರೆಗೆ ಸಾರ್ವಜನಿಕರನ್ನು ಒಗ್ಗೂಡಿಸಿ ಬೃಹತ್ ರ್‍ಯಾಲಿ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೊಳ್ನಾಡು ಬ್ಲಾಕ್ ಸಮಿತಿ ಸದಸ್ಯ ಹೈದರಾಲಿ ಕಡಂಬು, ಎಸ್‌ಡಿಪಿಐ ಬ್ರಾಂಚ್ ಅಧ್ಯಕ್ಷ ಶರೀಫ್ ಕಡಂಬು, ಕಾರ್ಯದರ್ಶಿಗಳಾದ ಶಹೀದ್ ಪಿಲಿವಲಚ್ಚಿಲ್, ಕಾದರ್ ಕಡಂಬು, ಅದ್ದ ಕಡಂಬು, ಅಶ್ರಫ್ ಕಡಂಬು, ಸುಲೈಮಾನ್, ಫಾರೂಕ್ ಕೆ., ಇಸಾಕ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಸ್ತೆಯ ಪೂರ್ಣ ಪ್ರಮಾಣದ ಡಾಮರೀಕರಣ ಮತ್ತು ಚರಂಡಿ ನಿರ್ಮಾಣದ ಕುರಿತು ಅಧಿಕಾರಿಗಳು ನೀಡಿರುವ ಭರವಸೆ ಈಡೇರದಿದ್ದರೆ ಮುಂದಿನ ಹಂತದ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.




