ಪಾಲಕ್ಕಾಡ್: ಹಾಡಹಗಲೇ ಆಭರಣ ಅಂಗಡಿಗೆ ನುಗ್ಗಿ ಬಂದೂಕು ತೋರಿಸಿ 20 ಪವನ್ ಚಿನ್ನ ದರೋಡೆ
ಪಾಲಕ್ಕಾಡ್: ಹಾಡಹಗಲೇ ಆಭರಣ ಅಂಗಡಿಗೆ ನುಗ್ಗಿದ ಮೂವರು ದುಷ್ಕರ್ಮಿಗಳ ತಂಡವು, ನೌಕರರಿಗೆ ಬಂದೂಕು ಮತ್ತು ಚಾಕು ತೋರಿಸಿ ಬೆದರಿಸಿ ಸುಮಾರು 20 ಪವನ್ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಭಯಾನಕ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪೆರಿಂಗೊಟ್ಟುಕುರಿಶಿಯಲ್ಲಿ ಶುಕ್ರವಾರ ನಡೆದಿದೆ. ಪೆರಿಂಗೊಟ್ಟುಕುರಿಶಿಯಲ್ಲಿರುವ ‘ಇಶಾನ್ ಗೋಲ್ಡ್’ ಆಭರಣ ಮಳಿಗೆಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ದರೋಡೆ ಸಂಭವಿಸಿದೆ.
ಯಾವುದೇ ಮುಖವಾಡ ಧರಿಸದೆ ಗ್ರಾಹಕರ ಸೋಗಿನಲ್ಲಿ ಅಂಗಡಿಯೊಳಗೆ ಬಂದ ಮೂವರು ದುಷ್ಕರ್ಮಿಗಳು, ಚಿನ್ನದ ಸರಗಳನ್ನು ತೋರಿಸುವಂತೆ ಕೇಳಿದ್ದಾರೆ. ನೌಕರರು ಆಭರಣಗಳನ್ನು ತೆಗೆದು ಪ್ರದರ್ಶಿಸಲು ಮುಂದಾಗುತ್ತಿದ್ದಂತೆಯೇ, ಗ್ಯಾಂಗ್ನ ಓರ್ವ ಏಕಾಏಕಿ ಬಂದೂಕು ತೆಗೆದು ಸಿಬ್ಬಂದಿಯತ್ತ ಗುರಿಯಿಟ್ಟಿದ್ದಾನೆ. ಮತ್ತೊಬ್ಬ ಚಾಕು ಝಳಪಿಸಿ ಬೆದರಿಕೆ ಹಾಕಿದ್ದು, ನೌಕರರ ಕೈಯಲ್ಲಿದ್ದ ಸುಮಾರು 20 ಪವನ್ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ದರೋಡೆಕೋರರು ಚಿನ್ನದೊಂದಿಗೆ ಪರಾರಿಯಾಗಲು ಯತ್ನಿಸಿದಾಗ, ಅಂಗಡಿ ಮಾಲೀಕರು ಹಾಗೂ ನೌಕರರು ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಪೈಕಿ ಓರ್ವ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ದರೋಡೆಯ ಸಂಪೂರ್ಣ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆರೋಪಿಗಳು ಹೊರರಾಜ್ಯದವರಾಗಿರಬಹುದು ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.




