ಕುಂದಾಪುರ: ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು: ಮೂವರು ಮಹಿಳೆಯರ ಬಂಧನ
ಕುಂದಾಪುರ: ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆದಿದ್ದ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ತಮಿಳುನಾಡು ಮೂಲದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು, ಕಳವಾಗಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
2026ರ ಸೆಪ್ಟೆಂಬರ್ 14ರಂದು ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿ ನಿವಾಸಿ ಮುತ್ತು (75) ಎಂಬುವವರು ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಜನಸಂದಣಿಯ ನಡುವೆ ಪ್ರದಕ್ಷಿಣೆ ಹಾಕುತ್ತಿದ್ದಾಗ ಈ ಘಟನೆ ನಡೆದಿತ್ತು. ಆರೋಪಿಗಳು ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದು, ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯ ವೇಳೆ, ಈ ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ವಲ್ಲಿಯಮ್ಮ, ದೇವಿ ಯಾನೆ ತಿಲೋತ್ತಮ ಮತ್ತು ಪೊನ್ನಿ ಎಂಬ ಮೂವರು ಮಹಿಳೆಯರನ್ನು ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ತಾಲೂಕಿನ ತಿರುನೆಲ್ಲಿ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನಿರ್ದೇಶನದ ಮೇರೆಗೆ, ಕುಂದಾಪುರ ಪೊಲೀಸ್ ನಿರೀಕ್ಷಕರು ನ್ಯಾಯಾಲಯದಿಂದ ಅನುಮತಿ ಪಡೆದು ಮೂವರು ಆರೋಪಿಗಳನ್ನು ಮಾನಂದವಾಡಿ ಜೈಲಿನಿಂದ ವಿಚಾರಣೆಗಾಗಿ ಕುಂದಾಪುರಕ್ಕೆ ಕರೆತಂದಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 15.340 ಗ್ರಾಂ ತೂಕದ ಕಳವಾಗಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು




